ಎಸ್.ಎಸ್.ಎಲ್.ಸಿಯಲ್ಲಿ 625ಕ್ಕೆ 625 ಅಂಕ ಗಳಿಸಿದ ಉಡುಪಿಯ ಪ್ರೀತಮ್ ಪೂಜಾರಿ
ಉಡುಪಿ ಜಿಲ್ಲೆಯ ಶಂಕರ ನಾರಾಯಣ ಮದರ್ ತೆರೆಸಾ ಆಂಗ್ಲ ಮಾದ್ಯಮ ಶಾಲೆಯ ಪ್ರೀತಂ ಜಿ. ಪೂಜಾರಿ 625ಕ್ಕೆ 625 ಅಂಕ ಗಳಿಸುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ಪ್ರೀತಮ್ ಪೂಜಾರಿ ಸೇರಿ ಒಟ್ಟು ಏಳು ಮಂದಿ ಗರಿಷ್ಠ 625 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ.
ಪ್ರೀತಮ್ ಬಿದ್ಕಲ್ಕಟ್ಟೆ ನಿವಾಸಿ ಗಣಪತಿ ಪೂಜಾರಿ-ನಾಗರತ್ನಾ ದಂಪತಿಯ ಇಬ್ಬರ ಮಕ್ಕಳ ಪೈಕಿ ಹಿರಿಯ ಪುತ್ರ. ತಂದೆ ಗಣಪತಿಯವರು ಶ್ರೀ ಲಕ್ಷ್ಮೀ ಎಕ್ಸ್ಪ್ರೆಸ್ ಖಾಸಗಿ ಬಸ್ಸಿನಲ್ಲಿ ಕಂಡಕ್ಟರ್. ತಾಯಿ ನಾಗರತ್ನಾ ಗೃಹಿಣಿ. ಎಲ್.ಕೆ.ಜಿ.ಯಿಂದಲೂ ಈತ ಮದರ್ ಥೆರೆಸಾ ಸಂಸ್ಥೆಯಲ್ಲಿ ಕಲಿತಿದ್ದ.
ಪೋಷಕರು ಹಾಗೂ ವಿದ್ಯಾಸಂಸ್ಥೆಯವರ ಪ್ರೋತ್ಸಾಹ, ಮಾರ್ಗದರ್ಶನ ಸಾಧನೆಗೆ ಪ್ರೇರಣೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಪಿಸಿಎಂಸಿಎಸ್ ಓದಿ ಜೆಇಇ ಪರೀಕ್ಷೆ ಬರೆಯುವ ಇಂಗಿತವನ್ನು ಸಾಧಕ ವಿದ್ಯಾರ್ಥಿ ಪ್ರೀತಂ ವ್ಯಕ್ತಪಡಿಸಿದ್ದಾರೆ.
ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಶಾಲೆಯ ಸಂಸ್ಥಾಪಕರಾದ ಶಮಿತಾ ರಾವ್ ಬಲ್ಮಠ, ರೇನಿಟಾ ಲೋಬೋ ಮಾತನಾಡಿ, ವಿದ್ಯಾರ್ಥಿ ಪ್ರೀತಮ್ ಪೂಜಾರಿ ಸಾಧನೆ ಸಂತಸ ತಂದಿದೆ. ಆತ ವಿದ್ಯಾಭ್ಯಾಸ ಹಾಗೂ ಇತರ ಚಟುವಟಿಕೆಯಲ್ಲಿ ಸದಾ ಚುರುಕಾಗಿದ್ದ. 625 ಅಂಕ ಪಡೆಯುವ ನಿರೀಕ್ಷೆಯೂ ನಮಗೆ ಇತ್ತು. ಆತನ ಪರಿಶ್ರಮದ ಜೊತೆಗೆ ಗುರುಹಿರಿಯರ ಜೊತೆ ವಿನಮ್ರತೆ ಹೊಂದಿದ್ದ. ಈ ಬಾರಿ ರಾಜ್ಯಮಟ್ಟದ ಕ್ವಿಝ್ ನಲ್ಲಿ ಎರಡನೇ ಸ್ಥಾನಿಯಾಗಿದ್ದ ಎಂದರು.