-->
ನಾರಿ ಶಕ್ತಿ ಹೆಸರಿನಲ್ಲಿ ಬಿಜೆಪಿಯಿಂದ ಮೋಸದಾಟ - ಕೃಪಾ ಆಳ್ವಾ

ನಾರಿ ಶಕ್ತಿ ಹೆಸರಿನಲ್ಲಿ ಬಿಜೆಪಿಯಿಂದ ಮೋಸದಾಟ - ಕೃಪಾ ಆಳ್ವಾ


ನಾರಿ ಶಕ್ತಿ ಹೆಸರಿನಲ್ಲಿ ರಾಜಕೀಯ ಲಾಭಕ್ಕಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, 2023 ರ ಮಹಿಳಾ ಮೀಸಲಾತಿ ಕಾನೂನನ್ನು ಯಾವುದೇ ಷರತ್ತಿಲ್ಲದೆ ತಕ್ಷಣ ಜಾರಿಗೆ ತರಬೇಕು  ಎಂದು ಕರ್ನಾಟಕ ರಾಜ್ಯ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕರಾದ  ಕೃಪಾ ಆಳ್ವ ಆಗ್ರಹಿಸಿದರು.

ಅವರು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಹಿಳೆಯರ ಸಬಲೀಕರಣದ ಹೆಸರಿನಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಕಾಯ್ದೆ 2026 ಹಾಗೂ ಕೇಂದ್ರಾಳಿತ ಪ್ರದೇಶಗಳ ಮಸೂದೆ ಮೂಲಕ ಚುನಾವಣಾ ಕ್ಷೇತ್ರಗಳನ್ನು ತಮ್ಮ ಲಾಭಕ್ಕೆ ತಿರುಗಿಸಲು ಯತ್ನಿಸಲಾಗುತ್ತಿದೆ ಎಂದು ಟೀಕಿಸಲಾಗಿದೆ. 2011ರ ಜನಗಣತಿ ಆಧಾರದಲ್ಲಿ ಭವಿಷ್ಯದ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ಪ್ರಶ್ನೆಗಳು ಎದ್ದಿದ್ದು, 2023ರಲ್ಲಿ ಅಂಗೀಕರಿಸಿದ ಮಹಿಳಾ ಮೀಸಲಾತಿ ಕಾನೂನನ್ನು ವಿಳಂಬಗೊಳಿಸಿರುವುದಕ್ಕೆ ಸ್ಪಷ್ಟನೆ  ನೀಡಲಿ ಎಂದರು.

ಮಣಿಪುರದಲ್ಲಿ ಮಹಿಳೆಯರ ಮೇಲಿನ ಹಿಂಸೆ, ಬೆಲೆ ಏರಿಕೆ, LPG ದರ ಹೆಚ್ಚಳ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಹೋರಾಟ, ಮತದಾರರ ಪಟ್ಟಿಯಿಂದ ಮಹಿಳೆಯರ ಹೆಸರು ಕಳೆದುಹೋಗುತ್ತಿರುವುದು ಸೇರಿದಂತೆ ಹಲವು ಸಮಸ್ಯೆಗಳಿದ್ದು ಇವುಗಳ ಕುರಿತು ನರೇಂದ್ರ ಮೋದಿಯವುರು ಮೌನ ವಹಿಸಿದ್ದಾರೆ. ಇದೇ ವೇಳೆ ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್ ವಿಂಗಡನೆ ಪ್ರಕ್ರಿಯೆಗೆ ಕಟ್ಟಿ ಹಾಕುವುದು ಸರಿಯಲ್ಲ, ಇದರಿಂದ ದಕ್ಷಿಣ ರಾಜ್ಯಗಳ ಪ್ರತಿನಿಧಿತ್ವ ಕಡಿಮೆಯಾಗುವ ಸಾಧ್ಯತೆ ಇದೆ  ಎಂದರು.

60ಕ್ಕೂ ಹೆಚ್ಚು ಮಹಿಳಾ ಸಂಘಟನೆಗಳು ಕೇಂದ್ರ ಸರಕಾರದ ಈ ಕ್ರಮವನ್ನು ವಿರೋಧಿಸಿರುವುದಾಗಿ ತಿಳಿದುಬಂದಿದೆ. ಸರ್ಕಾರ ಪಾರದರ್ಶಕತೆ ತೋರಬೇಕು ಹಾಗೂ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ. ಮಹಿಳಾ ಮೀಸಲಾತಿ ತಕ್ಷಣ ಜಾರಿಗೆ ಬರಬೇಕು, ಯಾವುದೇ ಷರತ್ತು ಇರಬಾರದು ಹಾಗೂ ಕ್ಷೇತ್ರಗಳ ಪುನರ್ ವಿಂಗಡಣೆಯನ್ನು ಇದರ ಜೊತೆ ಸಂಬಂಧಿಸಬಾರದು  ಎಂದು ಒತ್ತಾಯಿಸಿದರು.

ಪರಿಸರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಾಲೆಟ್  ಪಿಂಟೊ ಮಾತನಾಡಿ ಕ್ಷೇತ್ರ ವಿಂಗಡನೆ ರಹಿತವಾಗಿ 2023ರಲ್ಲಿ ಅಂಗೀಕಾರಗೊಂಡಿರುವ ಶೇ. 33 ಮಹಿಳಾ ಮೀಸಲಾತಿಯನ್ನು ಅನುಷ್ಟಾನಗೊಳಿಸಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯದಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಕ್ಷೇತ್ರ ವಿಂಗಡನೆ ಹಾಗೂ ಜನಗಣತಿಯೊಂದಿಗೆ ಜೋಡಿಸಿಕೊಂಡು ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಕೇಂದ್ರ ಸರಕಾರದ ಕುತಂತ್ರಕ್ಕೆ ಸೋಲಾಗಿರುವುದೇ ಹೊರತು 2023ರಲ್ಲಿ ಅಂಗೀಕಾರಗೊಂಡಿರುವ ಶೇ. 33 ಮೀಸಲಾತಿ ಸರ್ವ ಪಕ್ಷಗಳಿಂದ ಅಂಗೀಕಾರಗೊಂಡಿದೆ. ಅದನ್ನು ಯಥವತ್ತಾಗಿ ಜಾರಿಗೊಳಿಸುವ ಕಾರ್ಯವನ್ನು ಪ್ರಧಾನಿ ಮೋದಿಯವರು ಮಾಡಬೇಕು ಎಂದರು.

80ರ ದಶಕದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಮಹಿಳೆಯ ಮೀಸಲಾತಿಯ ಕನಸು ಕಂಡಿದ್ದರು. 23-74ನೆ ಸಾಲಿನಲ್ಲಿ ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಸ್ಥಳೀಯಾಡಳಿತದಲ್ಲಿ ಶೇ. 33 ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಿರುವುದು ಕಾಂಗ್ರೆಸ್. ಇದೀಗ ಕ್ಷೇತ್ರ ವಿಂಗಡನೆಯ ಮಹಿಳಾ ಮೀಸಲಾತಿಯ ವಿಧೇಯಕಕ್ಕೆ ಸೋಲಾಗಿರುವ ಬಗ್ಗೆ ಕಾಂಗ್ರೆಸ್ ವಿರುದ್ಧ ಬೊಬ್ಬೆ ಹಾಕುತ್ತಿರುವ ಬಿಜೆಪಿಯ ಮಹಿಳೆಯರು, ಕೇಂದ್ರ ಸರಕಾರಕ್ಕೆ ಈಗಾಗಲೇ ಅಂಗೀಕಾರ ಗೊಂಡಿರುವ ಮಹಿಳಾ ಮೀಸಲಾತಿ ಜಾರಿಗೆ ಒತ್ತಾಯಿಸಲಿ ಎಂದರು.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಇಂತಹ ಮಸೂದೆಯನ್ನು ಮಂಡನೆ ಮಾಡುವ ಬಗ್ಗೆ ಚುನಾವಣಾ ಆಯೋಗಕ್ಕೆ ಅರಿವಿಲ್ಲವೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರಕಾರ ಹಿಂದೆಯೂ ಮಹಿಳಾ ಮೀಸಲಾತಿ ಪರವಾಗಿದ್ದು, ಈಗಲೂ ಬೆಂಬಲ ನೀಡಲಿದೆ.  ಸಿದ್ಧರಾಮಯ್ಯ ಸರಕಾರದಲ್ಲಿ ವಿವಿಧ ಯೋಜನೆಗಳ ಮೂಲಕ ಮಹಿಳೆಯರು ಸಬಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳಾ ಮೀಸಲಾತಿ ಮೂಲಕ ರಾಜಕೀಯವಾಗಿ ಎದ್ದು ನಿಲ್ಲಲು ಅವಕಾಶ ಆಗಬೇಕು ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರಾರದ ವೆರೋನಿಕಾ ಕಾರ್ನೆಲಿಯೊ, ಬ್ರಹ್ಮಾವರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಡಾ ಸುನೀತಾ ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜ್ಯೋತಿ ಹೆಬ್ಬಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಹ ಸಂಚಾಲಕರಾದ ರೋಶನಿ ಒಲಿವರ್ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿತಾ ಡಿಸೋಜ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article