ಬರಿದಾಗುತ್ತಿದೆ ಸ್ವರ್ಣೆಯ ಒಡಲು: ಬಜೆ ಡ್ಯಾಂನಲ್ಲಿ ನೀರಿನ ಮಟ್ಟ ಇಳಿಕೆ
ಉಡುಪಿ ಜಿಲ್ಲೆಯಲ್ಲಿ ಈ ಬಾರಿ ತೀವ್ರ ತರಹದ ಉಷ್ಣತೆಯ ಪರಿಣಾಮದಿಂದಾಗಿ ಪ್ರಮುಖ ಜಲಮೂಲ ಸ್ವರ್ಣ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವದ ಆತಂಕ ಉಂಟಾಗಿದೆ.
ಉಡುಪಿ ಜಿಲ್ಲೆಯ ಬಹು ಗ್ರಾಮಗಳಿಗೆ ನೀರುಣಿಸುವ ಬಜೆ ಪ್ರದೇಶದಲ್ಲಿರುವ ಅಣೆಕಟ್ಟಿನಲ್ಲಿ ಸುಮಾರು ಒಂದು ಮೀಟರ್ ಗಿಂತಲೂ ಕಡಿಮೆ ನೀರಿನ ಮಟ್ಟ ಕುಸಿದಿರುವುದು ಗಮನಕ್ಕೆ ಬಂದಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಬಜೆ ಡ್ಯಾಮ್ ನಲ್ಲಿ ನೀರಿನ ಮಟ್ಟ 4. 86 ಮೀಟರ್ ಇತ್ತು ಆದರೆ ಈ ವರ್ಷ 3. 89 ಮೀಟರ್ ಗೆ ಕುಸಿದಿರುವುದು ನೀರಿನ ಅಭಾವತೆಯನ್ನು ಸೂಚಿಸುತ್ತದೆ. ದಿನೇ ದಿನೇ ಉರಿಬಿಸಿಲ ತಾಪ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕೆಲ ದಿನಗಳಲ್ಲಿ ನೀರು ಸಂಪೂರ್ಣವಾಗಿ ಬತ್ತಿ ಹೋಗುವ ಆತಂಕವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ವಾರಾಹಿ ನದಿ ನೀರು ಯೋಜನೆಯ ಪೂರೈಕೆಯಾತ್ತಿರುವುದರಿಂದ ಅಷ್ಟೇನು ಸಮಸ್ಯೆ ಕಾಡಿಲ್ಲ.ಆದರೆ ಬಿರು ಬೇಸಿಗೆಯಿಂದಾಗಿ ಜಲ ಮೂಲ ಬತ್ತಿ ಹೋಗುವ ಆತಂಕ ಮನೆ ಮಾಡಿದೆ. ಬೇಸಿಗೆ ಕಾಲದಲ್ಲಿ ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಕೆಯಾಗುವುದು ಸಾಮಾನ್ಯವಾದರೂ, ಈ ಬಾರಿ ಕುಸಿತದ ಪ್ರಮಾಣ ಹೆಚ್ಚು ಕಾಣಿಸಿಕೊಂಡಿದೆ. ನೀರಿನ ಸಮರ್ಪಕ ಬಳಕೆ, ಸಂರಕ್ಷಣೆ ಮತ್ತು ಪರ್ಯಾಯ ನೀರಿನ ವ್ಯವಸ್ಥೆ ಅಗತ್ಯವಾಗಿದೆ ಎಂದು ತಜ್ಞರು ಸೂಚಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ವರ್ಷಕ್ಕೆ ಹೆಚ್ಚಿನ ಮಳೆಯಾಗುತ್ತಿದ್ದರೂ, ಆ ನೀರನ್ನು ಸಮರ್ಪಕವಾಗಿ ಸಂಗ್ರಹಿಸುವ ವ್ಯವಸ್ಥೆಯ ಕೊರತೆ, ಜಲಾಶಯಗಳ ಸಮರ್ಪಕ ನಿರ್ವಹಣೆ ಇಲ್ಲದಿರುವುದು ಮತ್ತು ವೈಜ್ಞಾನಿಕ ನೀರಿನ ನಿರ್ವಹಣಾ ಕ್ರಮಗಳ ಅಭಾವವೇ ಇಂತಹ ಪರಿಸ್ಥಿತಿಗೆ ಕಾರಣವಾಗಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನೀರನ್ನು ಮಿತವಾಗಿ ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕುಡಿಯುವ ನೀರನ್ನು ತೋಟಗಳಿಗೆ ನೀರಾವರಿ ಮಾಡಲು, ವಾಹನ ತೊಳೆಯಲು ಅಥವಾ ಅನಗತ್ಯವಾಗಿ ಬಳಕೆ ಮಾಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಅಗತ್ಯವಿರುವ ಸ್ಥಳಗಳಲ್ಲಿ ಮಾತ್ರ ನೀರನ್ನು ಬಳಸಬೇಕು ಎಂಬ ಅರಿವು ಮೂಡಿಸಲು ಸ್ಥಳೀಯ ಆಡಳಿತ ಮುಂದಾಗಿದೆ.
ತಜ್ಞರ ಪ್ರಕಾರ, ಮಳೆಯ ನೀರನ್ನು ಸಂಗ್ರಹಿಸುವ ರೇನ್‌ವಾಟರ್ ಹಾರ್ವೆಸ್ಟಿಂಗ್ ಪದ್ಧತಿಯನ್ನು ಕಡ್ಡಾಯಗೊಳಿಸುವುದು, ಹಳೆಯ ಕೆರೆ-ಕೊಳಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಜಲ ಸಂಪನ್ಮೂಲಗಳ ವೈಜ್ಞಾನಿಕ ನಿರ್ವಹಣೆಯನ್ನು ಜಾರಿಗೆ ತರುವುದು ಅತ್ಯಾವಶ್ಯಕವಾಗಿದೆ. ಇಲ್ಲವಾದರೆ, ಭವಿಷ್ಯದಲ್ಲಿ ಉಡುಪಿ ಜಿಲ್ಲೆ ನೀರಿನ ಗಂಭೀರ ಸಂಕಷ್ಟವನ್ನು ಎದುರಿಸಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು.


