ನಕಲಿ ಐಟಿ ದಾಳಿ ಪ್ರಕರಣ: ಎಲ್ಲಾ ಆರೋಪಿಗಳ ಬಂಧನವಾಗಿಲ್ಲ- ಸಂತ್ರಸ್ತರ ಆರೋಪ
ಐಟಿ ಅಧಿಕಾರಿಗಳ ವೇಷದಲ್ಲಿ ನಕಲಿ ದಾಳಿ ನಡೆಸಲು ಯತ್ನಿಸಿದ ಪ್ರಕರಣಕ್ಕೆ ಎರಡು ವರ್ಷವಾದರೂ ಎಲ್ಲಾ ಆರೋಪಿಗಳನ್ನು ಬಂಧಿಸಿಲ್ಲ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ನಡೆಸುತ್ತಿರುವುದಾಗಿ ಹೇಳಿ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದೆ.
2024ರ ಮಾರ್ಚ್‌ನಲ್ಲಿ ಉಡುಪಿ ಜಿಲ್ಲೆಯ ಮಣೂರು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹಿಂದಿ ಚಿತ್ರದ ಮಾದರಿಯಲ್ಲಿ ಎರಡು ವಾಹನಗಳಲ್ಲಿ ಬಂದ ಆರೋಪಿಗಳು ಐಟಿ ಅಧಿಕಾರಿಗಳ ವೇಷದಲ್ಲಿ ಉದ್ಯಮಿಯೊಬ್ಬರ ಮನೆಗೆ ನುಗ್ಗಲು ಯತ್ನಿಸಿದ್ದರು. ಆದರೆ ಮನೆಯ ಸುತ್ತ ಅಳವಡಿಸಿದ್ದ ಸಿಸಿ ಟಿವಿ ಲೈವ್ ಮಾನಿಟರಿಂಗ್ ವ್ಯವಸ್ಥೆಯಿಂದ ನಕಲಿ ದಾಳಿ ಬೆಳಕಿಗೆ ಬಂದಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಂತರ ನಡೆದ ತನಿಖೆಯಲ್ಲಿ ಪ್ರಕರಣಕ್ಕೆ ಬಳಸಲಾದ ಕಾರನ್ನು ಪತ್ತೆಹಚ್ಚಿ ಕೆಲ ಆರೋಪಿಗಳನ್ನು ಬಂಧಿಸಲಾಗಿತ್ತು. ಸಂತೋಷ್ ನಾಯಕ್ (45), ದೇವರಾಜ್ ಸುಂದರ್ ಮೆಂಡನ್ (46) ಮತ್ತು ಶಿವ ಶೆಟ್ಟಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಆದರೆ ಈ ಪ್ರಕರಣದಲ್ಲಿ ಒಟ್ಟು 8 ಮಂದಿ ಭಾಗಿಯಾಗಿದ್ದು, ಇನ್ನೂ 5ರಿಂದ 6 ಮಂದಿ ಆರೋಪಿಗಳು ಬಂಧನಕ್ಕೆ ಒಳಗಾಗಿಲ್ಲ ಎಂದು ಮನೆಯ ಮಾಲಕಿ ಕವಿತಾ ಆರೋಪಿಸಿದ್ದಾರೆ. ಪ್ರಕರಣ ಇನ್ನೂ ಇತ್ಯರ್ಥವಾಗದೇ ಇರುವುದರಿಂದ ಮಾನಸಿಕ ಒತ್ತಡ ಎದುರಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ಕೆಲವರು ವಿವಿಧ ಸಂಘಟನೆಗಳ ಮೂಲಕ ತೇಜೋವಧೆ ನಡೆಸುವುದರ ಜೊತೆಗೆ ಹಣಕ್ಕಾಗಿ ಕಿರುಕುಳ ನೀಡುತ್ತಿರುವುದಾಗಿ ಕವಿತಾ ದೂರಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಪ್ರಕರಣದ ತನಿಖೆ ವಿಳಂಬವಾಗುತ್ತಿರುವುದರಿಂದ ಕುಟುಂಬದ ನೆಮ್ಮದಿ ಹಾಳಾಗಿದ್ದು, ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸವಿದೆ, ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸಿ ನ್ಯಾಯ ಒದಗಿಸಬೇಕೆಂದು ಸಂತ್ರಸ್ತೆ ಆಗ್ರಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
