ಉಡುಪಿಯಲ್ಲಿ ಐಐಜಿಜೆ ನೂತನ ಕಟ್ಟಡ ಉದ್ಘಾಟಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ಭಾರತೀಯ ರತ್ನಗಳ ಮತ್ತು ಆಭರಣಗಳ ಸಂಸ್ಥೆಯ ನೂತನ ಕಟ್ಟಡವನ್ನು ಉಡುಪಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವೆ, ದೇಶದ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. ವಿಶೇಷವಾಗಿ ಈ ಭಾಗದ ಯುವಕರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಪಶ್ಚಿಮ ಕರಾವಳಿಯ ಜಿಲ್ಲೆಗಳು ಆಭರಣ ಡಿಸೈನ್ ಕ್ಷೇತ್ರದಲ್ಲಿ ಈಗಾಗಲೇ ಹೆಸರುವಾಸಿಯಾಗಿದ್ದು, ಇಲ್ಲಿನ ಡಿಸೈನರ್ಗಳಿಗೆ ಇನ್ನಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಅಗತ್ಯವಿದೆ ಎಂದು ತಿಳಿಸಿದರು. ಇಲ್ಲಿ ರೂಪುಗೊಳ್ಳುವ ಡಿಸೈನ್ಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಜ್ಯುವೆಲ್ಲರಿ ರಫ್ತಿಗೆ ಹೇರಳ ಅವಕಾಶಗಳಿವೆ ಎಂದು ಹೇಳಿದರು.
ಆಭರಣ ನಿರ್ಮಾಣ ಕ್ಷೇತ್ರದಲ್ಲಿ ಖರೀದಿ ಸಾಮರ್ಥ್ಯ ಹೆಚ್ಚಿರುವುದರಿಂದ, ಈ ಕ್ಷೇತ್ರದಲ್ಲಿ ಬೆಳವಣಿಗೆಗೆ ಹೆಚ್ಚಿನ ಸಾಧ್ಯತೆಗಳಿವೆ. ಗ್ರಾಮೀಣ ಯುವಕರಿಗೂ ಕಡಿಮೆ ದರದಲ್ಲಿ ತರಬೇತಿ ನೀಡಿ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತದೆ ಎಂದು ಅವರು ತಿಳಿಸಿದರು. ಜೇಮ್ಸ್ ಅಂಡ್ ಜ್ಯುವೆಲ್ಸ್ ತರಬೇತಿ ಕೇಂದ್ರಗಳ ಪೈಕಿ ಉಡುಪಿ ನಾಲ್ಕನೇ ಸ್ಥಾನದಲ್ಲಿದೆ ಎಂಬುದನ್ನು ಅವರು ಉಲ್ಲೇಖಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ ಸುವರ್ಣ ಹಾಗೂ ಗುರ್ಮೆ ಸುರೇಶ್ ಶೆಟ್ಟಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿದರು. ಕೇಂದ್ರ ಸಚಿವೆ ಅವರನ್ನು ಈ ವೇಳೆ ಸನ್ಮಾನಿಸಲಾಯಿತು. ತರಭೇತಿ ಕೇಂದ್ರದ ಸಾಧಕ ವಿದ್ಯಾರ್ಥಿಗಳನ್ನು, ವಿಶ್ವಕರ್ಮ ಯೋಜನೆಯನ್ನು ಬಳಿಸಿಕಂಡ ಸದ್ಯ ಸಾಧನೆ ತೋರುತ್ತಿರುವ ಆಭರಣ ತಯಾರಕರನ್ನು ಈ ವೇಳೆ ಗುರುತಿಸಿ ಗೌರವಿಸಲಾಯಿತು.
ಜಿಜೆಇಪಿಸಿ ಚೇರ್ ಮನ್ ಕಿರೀಟ್ ಬನ್ಸಾಲಿ, ಉಪಾಧ್ಯಕ್ಷ ಶೌನಕ್ ಪರೀಕ್, ಸದನ್ ರೀಜನಲ್ ಚೇರ್ ಮನ್ ಮಹೇಂದ್ರ ಪಾಯಲ್ , ಅಕ್ಸಿಕ್ಯೂಟಿವ್ ಡೈರೆಕ್ಟರ್ ಸವ್ಯಸಾಚಿ ರೇ, ಕೌಶಿಕ್ ಮೊದಲಾದವರು ಉಪಸ್ಥಿತರಿದ್ದರು.
