ಉಡುಪಿ, ದ.ಕ ಜಿಲ್ಲೆಯಲ್ಲಿ ಇಂದಿನಿಂದ ಮೂರು ದಿನ ತಾಪಮಾನ ಏರಿಕೆ
Tuesday, April 21, 2026
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಏಪ್ರಿಲ್ 21 ರಿಂದ 23ರವರೆಗೆ ತಾಪಮಾನ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಂಗಳೂರು, ಉಳ್ಳಾಲ, ಬಂಟ್ವಾಳ, ಮೂಡುಬಿದಿರೆ, ಪುತ್ತೂರು ಹಾಗೂ ಕಡಬ ಭಾಗಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ. ಇದೇ ವೇಳೆ ಉಡುಪಿ ಜಿಲ್ಲೆಯ ಬ್ರಹ್ಮಾವರ, ಹೆಬ್ರಿ ಮತ್ತು ಕಾರ್ಕಳ ತಾಲೂಕುಗಳಲ್ಲೂ ತಾಪಮಾನ ಏರಿಕೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಮುನ್ಸೂಚನೆ ನೀಡಿದ್ದು, ಕಳೆದ ಕೆಲವು ದಿನಗಳಿಂದಲೇ ಜಿಲ್ಲೆಯ ಹಲವೆಡೆ ತಾಪಮಾನವು 37 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ದಾಖಲಾಗುತ್ತಿದೆ.
ತಾಪಮಾನ ಏರಿಕೆಯಿಂದಾಗಿ ಈ ಭಾಗಗಳಲ್ಲಿ ತೀವ್ರ ಬಿಸಿಗಾಳಿ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.