-->
ವೇಗ ಮೀರಿದವರ ಮೇಲೆ ಸ್ಪೀಡ್ ರಾಡಾರ್ ಕಣ್ಗಾವಲು: 243 ಚಾಲಕರಿಗೆ ಚಲನ್ ಶಾಕ್

ವೇಗ ಮೀರಿದವರ ಮೇಲೆ ಸ್ಪೀಡ್ ರಾಡಾರ್ ಕಣ್ಗಾವಲು: 243 ಚಾಲಕರಿಗೆ ಚಲನ್ ಶಾಕ್


ಉಡುಪಿ ಜಿಲ್ಲೆಯ ಆರು ಕಡೆಗಳಲ್ಲಿ ಕಾರ್ಯಾರಂಭಿಸಿರುವ ಅತ್ಯಾಧುನಿಕ ಸ್ಪೀಡ್ ರಾಡಾರ್ ಮೂಲಕ ಒಂದು ವಾರದಲ್ಲಿ 47,709 ಸಂಚಾರ ನಿಯಮ ಉಲ್ಲಂಘಿಸಿರುವ  ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 243 ಪ್ರಕರಣಗಳಿಗೆ ಚಲನ್ ನೀಡಲಾಗಿದೆ. 


ಮೇ. 21ರಿಂದ ಮೇ. 26ರವರೆಗೆ 3,99,319 ವಾಹನಗಳು ಓಡಾಟ ಮಾಡಿರುವುದು ಸ್ಪೀಡ್ ರಾಡಾರ್ ಕ್ಯಾಮರಾಗಳಲ್ಲಿ ದಾಖಲಾಗಿದ್ದು, ಅದರಲ್ಲಿ 47,709 ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಿವೆ. ಸೀಟ್ ಬೆಲ್ಟ್ ಧರಿಸದ 12,440 ಪ್ರಕರಣ, ಹೆಲ್ಮೆಟ್ ರಹಿತ ಚಾಲನೆ 11,509, ರಾಂಗ್ ವೇ ಡ್ರೈವಿಂಗ್ 2,783,  ಟ್ರಿಪಲ್ ರೈಡಿಂಗ್ 2,438, Speed Violation (HMV) 2,346 ಹಾಗೂ Speed Violation 1110 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಈಗಾಗಲೇ 243 ಪ್ರಕರಣಗಳಿಗೆ ಚಲನ್ ನೀಡಲಾಗಿದೆ. 


ಗಂಗೊಳ್ಳಿಯ ತ್ರಾಸಿಯಲ್ಲಿ ಸಂಚಾರ ಉಲ್ಲಂಘಿಸಿರುವ 29, ಬೈಂದೂರಿನ ನಾಯಕನಕಟ್ಟೆಯಲ್ಲಿ 36, ಕೋಟದ ತೆಕ್ಕಟ್ಟೆಯಲ್ಲಿ 35 , ಕಾಪು ದಂಡತೀರ್ಥ 42, ಪಡುವಿದ್ರೆ  ಉಚ್ಚಿಲದಲ್ಲಿ 59, ಕಾರ್ಕಳದ ದೂಪದಕಟ್ಟೆಯಲ್ಲಿ 34 ಸಂಚಾರ ಉಲ್ಲಂಘನೆ ಪ್ರಕರಣಗಳಿಗೆ ಈಗಾಗಲೇ ದಂಡದ ಚಲನ್ ಗಳನ್ನು ಕಳುಹಿಸಲಾಗಿದೆ ಎಂದು ಉಡುಪಿ ಜಿಲ್ಲಾ ಕಂಟ್ರೋಲ್ ರೂಮ್ ನ ಪಿಎಸ್ಐ ಅಜ್ಮಲ್ ಇಬ್ರಾಹಿಂ ಮಾಹಿತಿ ನೀಡಿದರು. 

ಸ್ಪೀಡ್ ರಾಡಾರ್ ಕ್ಯಾಮೆರಾಗಳ ನೇರ ಸಂಪರ್ಕವನ್ನು ಜಿಲ್ಲಾ ನಿಯಂತ್ರಣ ಕೊಠಡಿಗೆ ನೀಡಲಾಗಿದೆ. ಅಲ್ಲಿಂದಲೇ ಸಿಬ್ಬಂದಿಗಳು 24×7 ವಾಹನಗಳ ಚಲನವಲನಗಳನ್ನು ಹದ್ದಿನ ಕಣ್ಣಿನಿಂದ ಮಾನಿಟರ್ ಮಾಡುತ್ತಿದ್ದಾರೆ. ನಿಯಮ ಉಲ್ಲಂಘಿಸಿದ ತಕ್ಷಣವೇ ಡಿಜಿಟಲ್ ಸಾಕ್ಷ್ಯಗಳೊಂದಿಗೆ ದಂಡದ ಚಲನ್‌ಗಳನ್ನು ಸಿದ್ಧಪಡಿಸಿ, ವಾಹನ ಮಾಲೀಕರ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಿಕೊಡಲಾಗುತ್ತಿದೆ. 

ದಂಡದ ಚಲನ್ ತಲುಪಿದ 7 ದಿನಗಳ ಒಳಗಾಗಿ ವಾಹನ ಸವಾರರು ಉಡುಪಿ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಗೆ ಭೇಟಿ ನೀಡಿ ನಿಯಮಾನುಸಾರ ದಂಡದ ಮೊತ್ತವನ್ನು ಪಾವತಿಸಬೇಕು.ಈ ಅತ್ಯಾಧುನಿಕ ರಾಡಾರ್ ಕ್ಯಾಮೆರಾಗಳು ಕೇವಲ ವಾಹನಗಳ ವೇಗವನ್ನು ಮಾತ್ರ ಪತ್ತೆ ಹಚ್ಚುವುದಿಲ್ಲ, ಬದಲಾಗಿ ರಸ್ತೆಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಪ್ರತಿಯೊಂದು ಚಟುವಟಿಕೆಯನ್ನೂ ಸೆರೆಹಿಡಿಯಲಿವೆ. ಅತಿವೇಗ ಚಾಲನೆ, ಟ್ರಿಪಲ್ ರೈಡಿಂಗ್ (ಬೈಕ್‌ನಲ್ಲಿ ಮೂವರು ಪ್ರಯಾಣಿಸುವುದು), ಸೀಟ್ ಬೆಲ್ಟ್ ಧರಿಸದಿರುವುದು, ಹೆಲ್ಮೆಟ್ ರಹಿತ ಚಾಲನೆ, ಮೊಬೈಲ್ ಬಳಸುತ್ತಾ ಚಾಲನೆ ಮಾಡುವುದು, ತಪ್ಪು ದಿಕ್ಕಿನಲ್ಲಿ ಚಾಲನೆ, ಇತರ ಯಾವುದೇ ಸಂಚಾರ ನಿಯಮಗಳ ಉಲ್ಲಂಘನೆಯಾದಲ್ಲಿ ಸ್ಪೀಡ್ ರಾಡಾರ್ ಕ್ಯಾಮರಾಗಳು ಸೆರೆ ಹಿಡಿಯಲಿವೆ. 




Ads on article

Advertise in articles 1

advertising articles 2

Advertise under the article