ಉಡುಪಿಯೀಗ ಟೂರಿಸಂ "ಹಾಟ್ ಸ್ಪಾಟ್”: 3.47 ಕೋಟಿ ಪ್ರವಾಸಿಗರ ಭೇಟಿ
Monday, May 25, 2026
ಅರಬ್ಬಿ ಸಮುದ್ರದ ಅಲೆಗಳ ಸೊಬಗು, ಶ್ರೀಕೃಷ್ಣನ ದರ್ಶನದ ಭಕ್ತಿ ಭಾವ, ದೈವಾರಾಧನೆಯ ಸಂಸ್ಕೃತಿ ವೈಭವ — ಇವೆಲ್ಲವೂ ಸೇರಿ ಉಡುಪಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತುಂಬಿವೆ. ಕಳೆದ ನಾಲ್ಕು ತಿಂಗಳಲ್ಲಿ ಕೋಟ್ಯಾಂತರ ಪ್ರವಾಸಿಗರು ಕರಾವಳಿ ಜಿಲ್ಲೆಗಳತ್ತ ಮುಖ ಮಾಡಿದ್ದು, ಉಡುಪಿ ಈಗ ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ.
ಜನವರಿಯಿಂದ ಏಪ್ರಿಲ್‌ವರೆಗೆ ಸುಮಾರು 3.47 ಕೋಟಿ ಪ್ರವಾಸಿಗರು ಕರಾವಳಿ ಭಾಗಗಳಿಗೆ ಭೇಟಿ ನೀಡಿರುವುದು ಪ್ರವಾಸೋದ್ಯಮದ ಭರ್ಜರಿ ಬೆಳವಣಿಗೆಗೆ ಸಾಕ್ಷಿಯಾಗಿದೆ. ಅದರಲ್ಲೂ ಧಾರ್ಮಿಕ ಪ್ರವಾಸೋದ್ಯಮ ಹಾಗೂ ಬೀಚ್ ಪ್ರವಾಸೋದ್ಯಮ ಎರಡೂ ಸಮಾನವಾಗಿ ಜನರನ್ನು ಸೆಳೆಯುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಉಡುಪಿ ಭೇಟಿ ಬಳಿಕ, ಉಡುಪಿ ಶ್ರೀ ಕೃಷ್ಣ ಮಠ ದೇಶದ ವಿವಿಧ ಭಾಗಗಳ ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ. ವಿಶೇಷವಾಗಿ ಉತ್ತರ ಭಾರತದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಕಳೆದ ಕೆಲವು ತಿಂಗಳಲ್ಲಿ ಮಾತ್ರವೇ ಸುಮಾರು 9 ಲಕ್ಷಕ್ಕೂ ಹೆಚ್ಚು ಭಕ್ತರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಕರಾವಳಿಯ ಸುಂದರ ತಾಣಗಳಾದ ಮಲ್ಪೆ ಬೀಚ್, ಸೈಂಟ್ ಮೇರಿಸ್ ದ್ವೀಪ, ಸೀ ವಾಕ್ ಪ್ರದೇಶಗಳಲ್ಲೂ ಪ್ರವಾಸಿಗರ ದಟ್ಟಣೆ ಹೆಚ್ಚಾಗಿದೆ. ಸಮುದ್ರ ತೀರದಲ್ಲಿ ಸೂರ್ಯಾಸ್ತದ ಸೊಬಗು ಕಣ್ತುಂಬಿಕೊಳ್ಳಲು, ಜಲಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಹಾಗೂ ಕುಟುಂಬದೊಂದಿಗೆ ವಿಶ್ರಾಂತಿ ಕಳೆಯಲು ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ‘ಕಾಂತಾರ’ ಸಿನಿಮಾದ ಪರಿಣಾಮವೂ ಕರಾವಳಿ ಪ್ರವಾಸೋದ್ಯಮದ ಮೇಲೆ ಸ್ಪಷ್ಟವಾಗಿ ಕಾಣುತ್ತಿದೆ. ದೈವಾರಾಧನೆ, ಭೂತಕೋಲ, ತುಳುನಾಡಿನ ಸಂಸ್ಕೃತಿ ಬಗ್ಗೆ ದೇಶದಾದ್ಯಂತ ಕುತೂಹಲ ಹೆಚ್ಚಿದ್ದು, ದೈವಾರಾಧನೆ ನಡೆಯುವ ಸ್ಥಳಗಳಿಗೂ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಸ್ಥಳೀಯ ಸಂಸ್ಕೃತಿ ಮತ್ತು ಆಚರಣೆಗಳನ್ನು ಹತ್ತಿರದಿಂದ ನೋಡುವ ಆಸಕ್ತಿ ಪ್ರವಾಸಿಗರಲ್ಲಿ ಹೆಚ್ಚಾಗಿದೆ.
ಪ್ರವಾಸೋದ್ಯಮದ ಈ ಏರಿಕೆಯಿಂದ ಕರಾವಳಿಯ ಆರ್ಥಿಕ ಚಟುವಟಿಕೆಗೂ ಹೊಸ ಬಲ ಸಿಕ್ಕಿದೆ. ಹೋಟೆಲ್ ಉದ್ಯಮ, ಹೋಂ ಸ್ಟೇ, ಪ್ರವಾಸಿ ವಾಹನಗಳು, ಸಣ್ಣ ವ್ಯಾಪಾರಿಗಳು ಹಾಗೂ ಸ್ಥಳೀಯ ಕೈಗಾರಿಕೆಗಳಿಗೆ ಉತ್ತಮ ಆದಾಯ ದೊರೆಯುತ್ತಿದೆ.
ಈಗಾಗಲೇ ಶಾಲಾ ಮಕ್ಕಳ ಬೇಸಿಗೆ ರಜೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರವಾಸಿಗರು ಉಡುಪಿ ಹಾಗೂ ಕರಾವಳಿ ಭಾಗಗಳಿಗೆ ಆಗಮಿಸುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಭಕ್ತಿ, ಪ್ರಕೃತಿ ಮತ್ತು ಸಂಸ್ಕೃತಿಯ ಸಂಗಮವಾಗಿರುವ ಉಡುಪಿ ಜಿಲ್ಲೆ ಇದೀಗ ಪ್ರವಾಸೋದ್ಯಮದ ಹೊಸ ಅಧ್ಯಾಯ ಬರೆಯುತ್ತಿದೆ.


