ಗೋಡಂಬಿ ಉದ್ಯಮಿಗಳಿಂದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಭೇಟಿ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಅಖಿಲ ಭಾರತ ಗೋಡಂಬಿ ಉದ್ಯಮ ಸಂಘದ ಅಧ್ಯಕ್ಷ ಬೋಳ ರಾಹುಲ್ ಕಾಮತ್, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಇತರರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಗೋಡಂಬಿ ಉದ್ಯಮ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿ ಮನವಿ ಸಲ್ಲಿಸಿದರು.
ಭಾರತದಲ್ಲಿ ಗೋಡಂಬಿ ಉದ್ಯಮದ ಹಿತಾಸಕ್ತಿಯನ್ನು ಕಾಪಾಡುವುದರಿಂದ ಲಕ್ಷಾಂತರ ಕಾರ್ಮಿಕರ ಬದುಕು ಉಳಿಯುವುದರ ಜೊತೆಗೆ ತೋಟಗಾರಿಕಾ ಕ್ಷೇತ್ರಕ್ಕೂ ಉತ್ತೇಜನ ಸಿಗಲಿದೆ ಎಂದು ನಿಯೋಗ ಸಚಿವರಿಗೆ ವಿವರಿಸಿತು.
ವಿದೇಶಗಳಿಂದ ಗೋಡಂಬಿ ಆಮದು ಹೆಸರಿನಲ್ಲಿ ಸುಂಕ ಕಡಿತಗೊಳಿಸಲಾಗುತ್ತಿರುವುದು, ನಿಯಮ ಉಲ್ಲಂಘಿಸಿ ಗೋಡಂಬಿ ಸಾಗಾಟ ನಡೆಯುತ್ತಿರುವುದು ಹಾಗೂ ಇತರ ರಾಷ್ಟ್ರಗಳಲ್ಲಿ ತಿರಸ್ಕೃತಗೊಂಡ ಕಳಪೆ ಗುಣಮಟ್ಟದ ನುಚ್ಚು ಗೋಡಂಬಿಯನ್ನು ಪಶು ಆಹಾರ ಉತ್ಪಾದನೆ ಹೆಸರಿನಲ್ಲಿ ಸುಂಕ ವಿನಾಯಿತಿಯೊಂದಿಗೆ ಆಮದು ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದು ದೇಶೀಯ ಉದ್ಯಮಕ್ಕೆ ಹೊಡೆತ ನೀಡುತ್ತಿದೆ ಎಂದು ನಿಯೋಗ ತಿಳಿಸಿತು.
ಕೆಲವೆಡೆ ನೈಜ ಗೋಡಂಬಿಯನ್ನು “ಹುರಿದ ಗೋಡಂಬಿ” ಎಂದು ಘೋಷಿಸಿ ದರ ವ್ಯತ್ಯಾಸ ಸೃಷ್ಟಿಸಲಾಗುತ್ತಿದ್ದು, ಸಂಶೋಧನಾ ಸಂಸ್ಥೆಗಳ ತಪಾಸಣಾ ಕ್ರಮಗಳಿಂದ ಉದ್ಯಮದಲ್ಲಿ ಅನಗತ್ಯ ಗೊಂದಲ ಉಂಟಾಗುತ್ತಿದೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಗೋಡಂಬಿ ಉದ್ಯಮವನ್ನು ಉಳಿಸಿ ಬೆಳೆಸಲು ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಮನವಿ ಮಾಡಿತು. ಸುದೀರ್ಘ ಚರ್ಚೆಯ ಬಳಿಕ ಸಚಿವ ಪಿಯೂಷ್ ಗೋಯಲ್, ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಅಕ್ರಮ ಗೋಡಂಬಿ ಆಮದು ತಡೆಯಲು ಕಟ್ಟು ನಿಟ್ಟಿನ ಮಾರ್ಗಸೂಚಿ ರೂಪಿಸುವಂತೆ ಸೂಚನೆ ನೀಡಿದರು. ಪಶು ಆಹಾರ ಹೆಸರಿನಲ್ಲಿ ಸುಂಕ ರಹಿತ ಗೋಡಂಬಿ ಆಮದು ನಿಲ್ಲಿಸುವಂತೆ ಹಾಗೂ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ ಮೂಲಕ ಗುಣಮಟ್ಟದ ತೀವ್ರ ಪರಿಶೀಲನೆ ನಡೆಸುವಂತೆ ನಿರ್ದೇಶಿಸಿದರು.
ಅಕ್ರಮ ಆಮದುಗಳನ್ನು ತಡೆದು ದೇಶೀಯ ಮಾನದಂಡಗಳ ಪ್ರಕಾರ ಮಾತ್ರ ಆಮದುಗಳಿಗೆ ಅವಕಾಶ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಗೇರುಬೀಜ ಉದ್ಯಮ ಉಳಿಸಿ ಬೆಳೆಸಲು ಸಹಕಾರ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು. ದೆಹಲಿಯ ಕೇಂದ್ರ ಸಚಿವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಖಿಲ ಭಾರತ ಗೋಡಂಬಿ ಉದ್ಯಮ ಸಂಘದ ಕಾರ್ಯದರ್ಶಿ ಎಂ. ರಾಮಕೃಷ್ಣನ್, ಪ್ರಕಾಶ್ ಕಲ್ಬಾವಿ, ತುಕಾರಾಂ ಪ್ರಭು, ಉಪೇಂದ್ರ ಕೆ ಹಾಗೂ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿತಿನ್ ಯಾದವ್, ಆರ್ಥಿಕ ಸಲಹೆಗಾರ್ತಿ ಪ್ರಿಯಾ ನಾಯರ್, ಹೆಚ್ಚುವರಿ ಡಿಜಿಎಫ್‌ಟಿ ರಾಕೇಶ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
.jpeg)