-->
ಅವಧಿಪೂರ್ವ ಮಳೆ ಮುನ್ಸೂಚನೆಯಿದ್ದರೂ ಚರಂಡಿ ಹೂಳೆತ್ತಲು ನಗರಸಭೆ ಅಸಡ್ಡೆ

ಅವಧಿಪೂರ್ವ ಮಳೆ ಮುನ್ಸೂಚನೆಯಿದ್ದರೂ ಚರಂಡಿ ಹೂಳೆತ್ತಲು ನಗರಸಭೆ ಅಸಡ್ಡೆ


ಮಳೆಗಾಲ ಆರಂಭಕ್ಕೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಆದರೆ ಉಡುಪಿ ನಗರದಲ್ಲಿ ಮಳೆಗಾಲದ ಮುನ್ನೆಚ್ಚರಿಕೆ ಕೆಲಸಗಳು ಇನ್ನೂ ಆರಂಭವಾಗಿಲ್ಲ. ಈಗಾಗಲೇ ಪೂರ್ಣಗೊಳ್ಳಬೇಕಿದ್ದ ಸಮಯದಲ್ಲಿ, ಉಡುಪಿ ನಗರಸಭೆ ವ್ಯಾಪ್ತಿಯ ಹಲವೆಡೆ ಚರಂಡಿಗಳು ಇನ್ನೂ ಹೂಳಿನಿಂದ ತುಂಬಿಕೊಂಡಿವೆ. ನಗರದಲ್ಲಿನ ಪ್ರಮುಖ ರಸ್ತೆ ಬದಿಯ ಚರಂಡಿಗಳಲ್ಲಿ ಕಳೆ ಗಿಡಗಳು ಬೆಳೆದು ನೀರಿನ ಹರಿವಿಗೆ ಅಡ್ಡಿಯಾಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.


ಉಡುಪಿ ನಗರ ವ್ಯಾಪ್ತಿಯಲ್ಲಿ ಅಲ್ಲಲ್ಲಿ ರಸ್ತೆ ಕಾಮಗಾರಿಗಾಗಿ ರಸ್ತೆಗಳನ್ನು ಅಗೆದು ಹಾಕಲಾಗಿದೆ. ಕೆಲವೆಡೆ ಮಳೆ ನೀರು ಹಯುವ ಚರಂಡಿಗಳನ್ನು ಪೊದೆಗಳು ಅಪ್ಪಿಕೊಂಡಂತಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಳೆ ಬಂದರೆ ರಸ್ತೆಯುದ್ದಕ್ಕೂ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಳ್ಳಲಿದೆ. ಮಳೆ ಸುರಿಯಲು ಆರಂಭವಾದರೆ ನೀರು ಸರಿಯಾಗಿ ಹರಿಯದೆ ರಸ್ತೆಗಳ ಮೇಲೆ ನಿಂತುಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಗುರುವಾರ ಬೆಳಗ್ಗೆ ಸುರಿದ ಅಕಾಲಿಕ ಮಳೆಯಿಂದಾಗಿ ರಸ್ತೆಯುದ್ದಕ್ಕೂ ಚರಂಡಿ ನೀರು ಹರಿದು ಬಂದಿದೆ. 

              (ಗುರುವಾರ ಸುರಿದ ಮಳೆನೀರು ರಸ್ತೆಯಲ್ಲೇ ಹರಿಯುತ್ತಿರುವುದು)                   

ಉಡುಪಿ ನಗರದ ಹಲವೆಡೆ ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಮಣ್ಣು ಮತ್ತು ಕಳೆ ಗಿಡಗಳು ತುಂಬಿಕೊಂಡಿದ್ದು, ದುರ್ವಾಸನೆಯೂ ಹೆಚ್ಚುತ್ತಿದೆ. ಈಗಾಗಲೇ ಕೆಲವು ಪ್ರದೇಶಗಳಲ್ಲಿ ಸೊಳ್ಳೆಗಳ ಕಾಟವೂ ಹೆಚ್ಚಾಗಿದ್ದು, ಆರೋಗ್ಯ ಸಮಸ್ಯೆಗಳ ಭೀತಿಯೂ ಎದುರಾಗಿದೆ. ಮಳೆಗಾಲಕ್ಕೆ ಮುನ್ನ ತುರ್ತು ಕ್ರಮ ಕೈಗೊಂಡು ಚರಂಡಿ ಹೂಳೆತ್ತುವ ಹಾಗೂ ಕಳೆ ತೆರವು ಮಾಡುವ ಕಾರ್ಯವನ್ನು ವೇಗಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಉಡುಪಿ ನಗರದಲ್ಲಿ ಪ್ರತಿ ವರ್ಷವೂ ಮಳೆ ಬಂದಾಗ ಇದೇ ಸಮಸ್ಯೆ ಎದುರಾಗುತ್ತದೆ. ಮಳೆಗಾಲ ಆರಂಭಕ್ಕೆ ಮೊದಲು ಕಾರ್ಮಿಕರ ಕೊರತೆ ಎನ್ನುವ ನೆಪವೊಡ್ಡಿ ಕಾಲಹರಣ ಮಾಡಲಾಗುತ್ತದೆ. ಮಳೆಗಾಲಕ್ಕೆ ಒಂದು ವಾರ ಇರುವಾಗ ಎಚ್ಚೆತ್ತುಕೊಳ್ಳುವ ನಗರಸಭೆ ಟೆಂಡರ್ ಕರೆದು ಚರಂಡಿಗಳ ಹೂಳೆತ್ತುವ ಕಾರ್ಯಕ್ಕೆ ಮುಂದಾಗುತ್ತದೆ. ಮಳೆ ಆರಂಭವಾದಾಗ ಹೂಳೆತ್ತುವ, ಕಳೆ ಗಿಡಗಳನ್ನು ತೆರವುಗೊಳಿಸುವ ಕಾರ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸುತ್ತದೆ. ಹೆಸರಿಗಷ್ಟೇ ಟೆಂಡರ್ ಕರೆದು ಹಣ ಬಿಡುಗಡೆಯಾಗುತ್ತದೆ. ಆದರೆ ಆ ಹಣ ಎಲ್ಲಿ ಹೋಗುತ್ತದೆ ಎಂದು ಬನ್ನಂಜೆ ವಾರ್ಡಿನ ನಿವಾಸಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಜೂನ್ ತಿಂಗಳಲ್ಲಿ ಮಳೆ ಆರಂಭವಾದ ಒಂದು ವಾರದಲ್ಲೇ ಬನ್ನಂಜೆ ವಾರ್ಡಿನ ಗರಡಿ ರಸ್ತೆ ಮುಳುಗಡೆಯಾಗುತ್ತದೆ. ಮಳೆ ನೀರು ಹರಿದು ಹೋಗುವ ಚರಂಡಿಯಲ್ಲಿ ಕಳೆ ಗಿಡಗಳು ಬೆಳೆದು ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ನಗರಸಭೆ ಮಾಡುವ ಎಡವಟ್ಟಿಗೆ ಈ ಭಾಗದ ಜನರು ಪ್ರತೀ ಮಳೆಗಾಲದಲ್ಲೂ ಮುಳುಗಡೆಯ ಶಿಕ್ಷೆಯನ್ನು ಅನುಭವಿಸುವಂತಾಗಿದೆ. ಮಳೆ ಶುರುವಾಗುವ ಮೊದಲೇ ನಗರಸಭೆ ಕ್ರಮ ಕೈಗೊಂಡಿದ್ದರೆ ಜನರಿಗೆ ಇಷ್ಟು ತೊಂದರೆ ಆಗುತ್ತಿರಲಿಲ್ಲ,” ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷವೂ ಮೇ ತಿಂಗಳ ಎರಡನೇ ವಾರದಲ್ಲಿ ಮಳೆ ಸುರಿದಿದೆ. ಈ ವರ್ಷವೂ ಅವಧಿಪೂರ್ವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದರೂ ನಗರಸಭೆ ಎಚ್ಚೆತ್ತುಕೊಂಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಮಳೆಗಾಲಕ್ಕೆ ಸಜ್ಜಾಗಬೇಕಾದ ಈ ಸಮಯದಲ್ಲಿ ನಗರಸಭೆಯ ನಿರ್ಲಕ್ಷ್ಯ ತಾಳುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.  

Ads on article

Advertise in articles 1

advertising articles 2

Advertise under the article