ತಮಿಳುನಾಡು ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಜೋಸೆಫ್ ವಿಜಯ್ ಪ್ರಮಾಣ ವಚನ ಸ್ವೀಕಾರ
Sunday, May 10, 2026
ತಮಿಳಗ ವೇಟ್ರಿ ಕಳಗಂ ಮುಖ್ಯಸ್ಧ, ನಟ ಜೋಸೆಫ್ ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಇಂದು (ಭಾನುವಾರ) ಪ್ರಮಾಣವಚನ ಸ್ವೀಕರಿಸಿದರು.
ವಿಜಯ್ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಗಮನ ಸೆಳೆಯಿತು.
ಎಪ್ರಿಲ್ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚಿಸಲು ಅಗತ್ಯವಿರುವ 118ರ ಮ್ಯಾಜಿಕ್ ಸಂಖ್ಯೆಯನ್ನು ತಲುಪಲು ಮಿತ್ರಪಕ್ಷಗಳ ಬೆಂಬಲ ಕೋರಿತ್ತು. ಕಾಂಗ್ರೆಸ್ ನ 5, ಸಿಪಿಐನ 2, ಸಿಪಿಐ(ಎಂ)ನ 2, ವಿಸಿಕೆಯ 2 ಮತ್ತು ಐಯುಎಂಎಲ್ ನ 2 ಪಕ್ಷಗಳು ವಿಜಯ್ ಅವರಿಗೆ ಬೆಂಬಲ ಸೂಚಿಸಿದ್ದವು.
ಚೆನ್ನೈನ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದ ಈ ಸಮಾರಂಭಕ್ಕೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಹಾಜರಾಗಿದ್ದರು. ವಿಜಯ್ ಪಕ್ಕದಲ್ಲೇ ಕುಳಿತಿದ್ದು, ರಾಹುಲ್ ಗಾಂಧಿ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು.
ನಟಿ ತ್ರಿಶಾ ಕೃಷ್ಣನ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದು, ವಿಜಯ್ ಅವರ ತಾಯಿ ಶೋಭಾ, ತಂದೆ ಎಸ್.ಎ. ಚಂದ್ರಶೇಖರ್ ಅವರು ಕೂಡ ತಮ್ಮ ಮಗ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕ್ಷಣವನ್ನು ಕಣ್ಣುಂಬಿಕೊಂಡಿದ್ದಾರೆ.