-->
ತೆಂಕನಿಡಿಯೂರು ಕಾಲೇಜಿಗೆ ವೈಮಾನಿಕ ದಾಳಿ; ಅಣಕು ಪ್ರದರ್ಶನ: ದಟ್ಟ ಹೊಗೆ ಕಂಡು ಜನ ಕಂಗಾಲು (Video)

ತೆಂಕನಿಡಿಯೂರು ಕಾಲೇಜಿಗೆ ವೈಮಾನಿಕ ದಾಳಿ; ಅಣಕು ಪ್ರದರ್ಶನ: ದಟ್ಟ ಹೊಗೆ ಕಂಡು ಜನ ಕಂಗಾಲು (Video)


ಒಂದೆಡೆ ಕಟ್ಟಡದ ತುದಿಯಿಂದ ಆಕಾಶಕ್ಕೇರಿದ ದಟ್ಟ ಹೊಗೆ… ಮತ್ತೊಂದೆಡೆ ಕಿವಿಗೆ ಬಿದ್ದ ಎಚ್ಚರಿಕೆಯ ಸೈರನ್ ಶಬ್ದ… ದಿಕ್ಕಾಪಾಲಾಗಿ ಓಡಾಡುತ್ತಿರುವ ಜನರು… ಕ್ಷಣಕ್ಕೊಂದು ಆತಂಕದ ವಾತಾವರಣ. ಇಂತಹ ದೃಶ್ಯಗಳು ಕಂಡು ಬಂದಿದ್ದು ತೆಂಕನಿಡಿಯೂರಿನಲ್ಲಿ ನಡೆದ ವೈಮಾನಿಕ ದಾಳಿಯ ಅಣಕು ಕಾರ್ಯಾಚರಣೆಯಲ್ಲಿ.


ಕಟ್ಟಡದ ಮೇಲೆ ಬಾಂಬ್ ದಾಳಿ ನಡೆದಂತೆಯೇ ಕೃತಕವಾಗಿ ದಟ್ಟ ಹೊಗೆ ಹರಡಿಸಲಾಯಿತು. ಗಾಯಗೊಂಡವರನ್ನು ರಕ್ಷಿಸುವ ಕಾರ್ಯದಲ್ಲಿ ತುರ್ತು ಸೇವಾ ಸಿಬ್ಬಂದಿ ತೊಡಗಿಸಿಕೊಂಡ ದೃಶ್ಯಗಳು ನೈಜ ಘಟನೆಯನ್ನೇ ನೆನಪಿಸಿತು.ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಮನ್ವಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದರು. 


ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೇ ಎಚ್ಚರಿಕೆಯ ಸೈರನ್ ಮೊಳಗಿತು. ತಕ್ಷಣವೇ ಸ್ಥಳದಲ್ಲಿದ್ದ ಜನರು ಸುರಕ್ಷಿತ ಪ್ರದೇಶಗಳತ್ತ ತೆರಳುವ ಅಭ್ಯಾಸ ಪ್ರದರ್ಶಿಸಿದರು. ಉಡುಪಿ ತೆಂಕನಿಡಿಯೂರು ಕಾಲೇಜಿನ ಆವರಣದಲ್ಲಿ ಇಂದು ವಿಭಿನ್ನ ಹಾಗೂ ರೋಚಕ ವೈಮಾನಿಕ ದಾಳಿಯ ಅಣಕು ಪ್ರದರ್ಶನ ನಡೆಯಿತು. ಯುದ್ಧ ಪರಿಸ್ಥಿತಿ ಅಥವಾ ಆಕಸ್ಮಿಕ ವೈಮಾನಿಕ ದಾಳಿ ಸಂಭವಿಸಿದರೆ ಸಾರ್ವಜನಿಕರು ಹೇಗೆ ಪ್ರತಿಕ್ರಿಯಿಸಬೇಕು, ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ತುರ್ತು ಪರಿಸ್ಥಿತಿಗಳಲ್ಲಿ ರಕ್ಷಣಾ ಕ್ರಮಗಳ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.  

ಅಗ್ನಿಶಾಮಕ ದಳ, ಗೃಹ ರಕ್ಷಕ ದಳ, ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೌರ ರಕ್ಷಕ ದಳ, ಲಯನ್ಸ್ ಕ್ಲಬ್ ಉಡುಪಿ, ರೆಡ್ ಕ್ರಾಸ್ ಘಟಕ ಹಾಗೂ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಹಳೆ ವಿದ್ಯಾರ್ಥಿ ಸಂಘದ   ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ತುರ್ತು ಕಾರ್ಯಾಚರಣೆ ನಡೆಸಲು ಅಗ್ನಿಶಾಮಕದಳದವರೊಂದಿಗೆ ಸಾರ್ವಜನಿಕರ ಸಹಕಾರವೂ ಅಗತ್ಯ. ಅಗ್ನಿ ದುರಂತ ಸಂಭವಿಸಿದ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಲು ಅಡ್ಡಿಪಡಿಸದೇ ಅಗ್ನಿಶಾಮಕದಳದವೊಂದಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಇಂತಹ ಅಣಕು ಪ್ರದರ್ಶನಗಳಿಂದ ಸಾಧ್ಯವಿದೆ ಎಂದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಉಡುಪಿ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ವಿನಾಯಕ ಕಲ್ಗುಟ್ಕರ್, ತೆಂಕನಿಡಿಯೂರು ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಬಸವರಾಜ್ ಹುಬ್ಬಳ್ಳಿ,ಗೃಹ ರಕ್ಷಕ ದಳ ಕಮಾಂಡೆಂಟ್ ಕೆ.ಸಿ ರಾಜೇಶ್, ಉಡುಪಿ ಪೌರ ರಕ್ಷಣಾ ದಳದ ಕಮಾಂಡಿಂಗ್ ಆಫೀಸರ್ ಡಾ. ವಿಜಯೇಂದ್ರ ರಾವ್, ಲಯನ್ಸ್ ಕ್ಲಬ್ ಉಡುಪಿ ಇದರ ಅಧ್ಯಕ್ಷ ಅಲೆವೂರು ದಿನೇಶ್ ಕಿಣಿ, , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆಶಾಲಿನಿ ಯು.ಬಿ ಮೊದಲಾದವರು ಇದರು. ಗೃಹ ರಕ್ಷಕ ದಳ ಕಮಾಂಡೆಂಟ್ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ರೆಡ್ ಕ್ರಾಸ್ ಘಟಕದ ಸಂಚಾಲಕ ಪ್ರಶಾಂತ್ ನೀಲಾವರ ವಂದಿಸಿದರು. 

ಈ ವೇಳೆ ಬಾಂಬ್ ದಾಳಿಯಂತಹ ಸಂಕಷ್ಟದ ಸಂದರ್ಭಗಳಲ್ಲಿ ಜನರು ಗಾಬರಿಗೊಳ್ಳದೇ ಶಾಂತವಾಗಿ ನಡೆದುಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಅಧಿಕಾರಿಗಳು ವಿವರಿಸಿದರು. ಸುರಕ್ಷತಾ ಕ್ರಮಗಳು, ತುರ್ತು ನಿರ್ಗಮನ ವ್ಯವಸ್ಥೆ, ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ವೈಮಾನಿಕ ದಾಳಿ ಸಂದರ್ಭಗಳಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. 


 


Ads on article

Advertise in articles 1

advertising articles 2

Advertise under the article