-->
ಜೂ. 27: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಣೆ

ಜೂ. 27: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಣೆ


ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸ್ಯಾಟಿ ವತಿಯಿಂದ ಉಡುಪಿ ಜಿಲ್ಲೆಯ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಸುಮಾರು 15 ಲಕ್ಷ ರೂ. ಮೌಲ್ಯದ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರಗಳ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸಸಿ ವಿತರಣೆ ಕಾರ್ಯಕ್ರಮವು ಜೂ. 27ರಂದು ಬೆಳಗ್ಗೆ 10.30 ಕ್ಕೆ ಉಡುಪಿ ಅಜ್ಜರಕಾಡು ಟೌನ್ ಹಾಲ್ ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಸಾಮಾಜಿಕ ಕಳಕಳಿಯ ಧೈಯದಡಿ ಉಡುಪಿ ಜಿಲ್ಲೆಯ ಸುಮಾರು 50 ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರಗಳ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಜೂನ್ 27ರಂದು ಬೆಳಿಗ್ಗೆ 10.30 ಗಂಟೆಗೆ ಉಡುಪಿ ಟೌನ್ ಹಾಲ್‌ನಲ್ಲಿ ಜರಗಲಿದೆ. ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಮಾಜಿ ಸಚಿವರು ಹಾಗೂ ಭಾರತ್ ಸೈಟ್ಸ್ ಅಂಡ್ ಗೈಡ್ಸ್ ಕರ್ನಾಟಕದ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ. ಆರ್ ಸಿಂಧ್ಯಾ ಅವರು ಉದ್ಘಾಟಿಸಲಿರುವರು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಎ. ಸುವರ್ಣ, ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯ ಪ್ರಾಂಶುಪಾಲರಾದ ಅಶೋಕ್ ಕಾಮತ್, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಧೀರ್ ಕುಮಾರ್ ಜೆ ಉಪಸ್ಥಿತರಿರುವರು. ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಜಯಕರ ಶೆಟ್ಟಿ ಇಂದ್ರಾಳಿಯವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಸಂಪನ್ಮೂಲ ವ್ಯಕ್ತಿಯಾಗಿರುವ ದಾಮೋದರ್ ಶರ್ಮ ಬಾರ್ಕೂರು ಇವರಿಂದ ಬೆಳಿಗ್ಗೆ 9.30ರಿಂದ ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಇರಲಿದೆ ಎಂದರು. 

ಸಹಕಾರ ಕ್ಷೇತ್ರದಲ್ಲಿ ಸತತ ಸಾಧನೆಯ ಮೂಲಕ ರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಂಡಿರುವ ಉಡುಪಿಯ ಪ್ರತಿಷ್ಠಿತ ಸಂಸ್ಥೆಯಾದ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಶತಮಾನೋತ್ಸವವನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿದೆ.1980ರಲ್ಲಿ ಕೇವಲ 306 ಸದಸ್ಯರು, ರೂ.6.200 ಪಾಲು ಬಂಡವಾಳ ಹಾಗೂ ರೂ.4.664 ಠೇವಣಿಯೊಂದಿಗೆ ಆರಂಭಗೊಂಡ ಸಂಘವು ಪ್ರಸ್ತುತ 23,000ಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು, ರೂ.685 ಕೋಟಿ ಠೇವಣಿ, ರೂ.537 ಕೋಟಿ ಸಾಲ ವಿತರಣೆ ಹಾಗೂ 2025-26ನೇ ಸಾಲಿನಲ್ಲಿ ಸುಮಾರು ರೂ.4,060 ಕೋಟಿ ವಾರ್ಷಿಕ ವಹಿವಾಟು ನಡೆಸಿ ರೂ.19 ಕೋಟಿಗೂ ಅಧಿಕ ಲಾಭ ಗಳಿಸುವ ಮೂಲಕ ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ.

ತನ್ನ ಕಾರ್ಯವ್ಯಾಪ್ತಿಯಲ್ಲಿ 12 ಶಾಖೆಗಳ ಮೂಲಕ ಗ್ರಾಹಕ ಸ್ನೇಹಿ ಸೇವೆಗಳನ್ನು ಒದಗಿಸುತ್ತಿರುವ ಸಂಘವು ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತವಾಗದೆ, ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಗಳ ಅಭಿವೃದ್ಧಿಗೂ ವಿಶೇಷ ಆದ್ಯತೆ ನೀಡುತ್ತಿದ್ದು, ವಾರ್ಷಿಕ ಸುಮಾರು ರೂ.25 ಲಕ್ಷಕ್ಕೂ ಅಧಿಕ ಮೊತ್ತವನ್ನು ವಿವಿಧ ಸಮಾಜಮುಖ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತಿದೆ. ಪೊಲೀಸ್ ಠಾಣೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಕಂಪ್ಯೂಟರ್ ವ್ಯವಸ್ಥೆಗಳ ಕೊಡುಗೆ, ಧಾರ್ಮಿಕ ಕೇಂದ್ರಗಳಿಗೆ ವಾಟರ್ ಚಿಲ್ಲರ್ ಮತ್ತು ಉತ್ತಮ ಗುಣಮಟ್ಟದ ಕುರ್ಚಿಗಳ ವಿತರಣೆ, ಬೃಹತ್ ರಕ್ತದಾನ ಶಿಬಿರ, ಉಚಿತ ನೇತ್ರ, ಸಾಮಾನ್ಯ ಆರೋಗ್ಯ ಹಾಗೂ ಮಧುಮೇಹ ತಪಾಸಣಾ ಶಿಬಿರಗಳು, ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ ಹಾಗೂ ದೇಶಭಕ್ತಿ ನೃತ್ಯ ಸ್ಪರ್ಧೆಗಳು, ಸ್ವಚ್ಛತಾ ಅಭಿಯಾನ ಸೇರಿದಂತೆ ಅನೇಕ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಸಂಘವು ನಿರಂತರವಾಗಿ ಹಮ್ಮಿಕೊಳ್ಳುತ್ತಾ ತನ್ನ ಸಾಮಾಜಿಕ ಬದ್ಧತೆಯನ್ನು ಸಾರ್ಥಕಗೊಳಿಸುತ್ತಿದೆ. ಸಹಕಾರದೊಂದಿಗೆ ಸಾಮಾಜಿಕ ಹೊಣೆಗಾರಿಕೆಯನ್ನು ಸಮನ್ವಯಗೊಳಿಸಿರುವ ಬಡಗಬೆಟ್ಟು ಸೊಸೈಟಿ, ಜನಸೇವೆಯ ಮೂಲಕ ಮಾದರಿ ಸಹಕಾರ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್ ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. 




Ads on article

Advertise in articles 1

advertising articles 2

Advertise under the article