-->
ಮನೆ ಕಳವು, ಬೈಕ್ ಕಳ್ಳತನ ಪ್ರಕರಣ: ಆರೋಪಿ ಬಂಧನ

ಮನೆ ಕಳವು, ಬೈಕ್ ಕಳ್ಳತನ ಪ್ರಕರಣ: ಆರೋಪಿ ಬಂಧನ


ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳವು ಹಾಗೂ ಬೈಕ್ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಕುಂದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಗುಜರಾತ್ ರಾಜ್ಯದ ಅಮ್ರೇಲಿ ಜಿಲ್ಲೆಯ ಸಾವರ್ ಕುಂಡ್ಲ ಪ್ರದೇಶದ ನಿವಾಸಿ ಲಾಲಾಜಿಬಾಯ್ ಬುದಾಬಾಯ್ ಸೊಲಂಕಿ (37) ಎಂದು ಗುರುತಿಸಲಾಗಿದೆ.

ಕಳೆದ ಮಾರ್ಚ್ ತಿಂಗಳಲ್ಲಿ ಸಂಗಮ್ ಜಂಕ್ಷನ್ ಸಮೀಪದ ಜೆಎಂಜೆ ವಿಲ್ಲಾ ನಿವಾಸದಲ್ಲಿ ಕಳ್ಳತನ ನಡೆದಿತ್ತು. ಕಳ್ಳರು ಮನೆಯ ಮುಂಭಾಗದ ಬಾಗಿಲಿನ ಚೀಲಕ ಮುರಿದು ಒಳನುಗ್ಗಿ ಕಪಾಟಿನಲ್ಲಿದ್ದ ₹10,000 ನಗದು ಹಣವನ್ನು ಕಳವು ಮಾಡಿದ್ದರು. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೇ ಅವಧಿಯಲ್ಲಿ ಕಸಬ ಗ್ರಾಮದ ವಿನಯ್ ಆಸ್ಪತ್ರೆ ಸಮೀಪದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಹೀರೋ ಹೋಂಡಾ ಮೋಟಾರ್ ಸೈಕಲ್‌ನ್ನು ಕಳವು ಮಾಡಲಾಗಿತ್ತು. ಸುಮಾರು ₹20,000 ಮೌಲ್ಯದ ಬೈಕ್ ಕಳ್ಳತನ ಪ್ರಕರಣವೂ ದಾಖಲಾಗಿತ್ತು.

ಪ್ರಕರಣಗಳ ತನಿಖೆ ಕೈಗೊಂಡ ಕುಂದಾಪುರ ಪೊಲೀಸರು ಆರೋಪಿಯ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಿದ್ದರು. ತನಿಖೆಯ ವೇಳೆ ಆರೋಪಿ ಗುಜರಾತ್ ಮೂಲದವನಾಗಿರುವುದು ಬೆಳಕಿಗೆ ಬಂದಿದ್ದು, ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ತಲೆಮರೆಸಿಕೊಂಡಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ವೇಳೆ ಆರೋಪಿ ಕುಂದಾಪುರದಲ್ಲಿ ಮನೆ ಕಳವು ಹಾಗೂ ಬೈಕ್ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯ ಮಾಹಿತಿಯ ಆಧಾರದ ಮೇಲೆ ಕಳವು ಮಾಡಲಾಗಿದ್ದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

Ads on article

Advertise in articles 1

advertising articles 2

Advertise under the article