-->
 ಉಡುಪಿಯ ಹೃದಯಭಾಗದಲ್ಲೇ ಸೊಳ್ಳೆಗಳ ಉತ್ಪಾದನಾ ಕೇಂದ್ರ..!

ಉಡುಪಿಯ ಹೃದಯಭಾಗದಲ್ಲೇ ಸೊಳ್ಳೆಗಳ ಉತ್ಪಾದನಾ ಕೇಂದ್ರ..!


ಉಡುಪಿ ನಗರದ ಹೃದಯಭಾಗದಲ್ಲಿರುವ ಹಳೆಯ ಸರ್ಕಾರಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಆವರಣವು ರೋಗ ಹರಡುವ ಕೇಂದ್ರವಾಗಿದೆ. ತಕ್ಷಣ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಒತ್ತಾಯಿಸಿದೆ. 


ಸ್ಥಳದಲ್ಲಿ ದಟ್ಟ ಗಿಡಗಂಟಿಗಳು ಬೆಳೆದು ಪೊದೆಗಳಾಗಿ ಮಾರ್ಪಟ್ಟಿದ್ದು, ವಿವಿಧ ರೀತಿಯ ಕಸ-ತ್ಯಾಜ್ಯಗಳನ್ನು ಎಸೆಯಲಾಗಿದೆ. ಈ ತ್ಯಾಜ್ಯಗಳು ಕೊಳೆತು ದುರ್ವಾಸನೆ ಬೀರುತ್ತಿದ್ದು, ಮಳೆನೀರು ತ್ಯಾಜ್ಯಗಳೊಂದಿಗೆ ಸೇರಿ ಅಗೆದಿರುವ ಗುಂಡಿಗಳಲ್ಲಿ ಸಂಗ್ರಹವಾಗುತ್ತಿದೆ. ಇದರಿಂದಾಗಿ ಈ ಪ್ರದೇಶವು ಮಾರಕ ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣವಾಗಿ, ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ರೂಪುಗೊಂಡಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಈ ಪರಿಸರದ ಸುತ್ತಮುತ್ತ ಯಾತ್ರಿಕರ ವಸತಿಗೃಹಗಳು, ವಾಣಿಜ್ಯ ಕಟ್ಟಡಗಳು, ಆಭರಣ ಮಳಿಗೆಗಳು, ಜನವಸತಿಗಳು ಹಾಗೂ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜೀ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿವೆ.ನಗರದ ಪ್ರಮುಖ ವಾಣಿಜ್ಯ ಮತ್ತು ಜನವಸತಿ ಪ್ರದೇಶದಲ್ಲೇ ಈ ಸ್ಥಳವಿರುವುದರಿಂದ ಸೊಳ್ಳೆ ಕಡಿತದಿಂದ ಉಂಟಾಗುವ ಡೆಂಗ್ಯೂ,


ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ. ಈ ಭಾಗದಲ್ಲಿ ಈಗಾಗಲೇ ಡೆಂಗ್ಯೂ ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ, ನಗರಾಡಳಿತ ಹಾಗೂ ಜಿಲ್ಲಾಡಳಿತವು ತಕ್ಷಣವೇ ಸ್ಥಳದಲ್ಲಿರುವ ಗಿಡಗಂಟಿಗಳ ಕಟಾವು ಹಾಗೂ ಕಸ-ತ್ಯಾಜ್ಯಗಳ ತೆರವು ಕಾರ್ಯ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಅಶುಚಿತ್ವ

ಕವಿ ಮುದ್ದಣ್ಣ ಮಾರ್ಗದಲ್ಲಿರುವ ನಗರಸಭೆ ಕಚೇರಿ ಸಮೀಪದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿಯೂ ಗಿಡಗಂಟಿಗಳು ವ್ಯಾಪಕವಾಗಿ ಬೆಳೆದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಆಸ್ಪತ್ರೆಯ ಕಾಂಪೌಂಡ್ ಒಳಭಾಗದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತಿದ್ದು, ಉರಗಗಳು ಹಾಗೂ ವಿಷಜಂತುಗಳು ಆಶ್ರಯ ಪಡೆಯಲು ಯೋಗ್ಯ ವಾತಾವರಣ ನಿರ್ಮಾಣವಾಗಿದೆ. ಪರಿಸರ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸಬೇಕಾದ ಆರೋಗ್ಯ ಕೇಂದ್ರದ ಆವರಣದಲ್ಲೇ ಅಶುಚಿತ್ವದ ವಾತಾವರಣ ಕಂಡುಬರುತ್ತಿರುವುದು ವಿಪರ್ಯಾಸವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ಜ್ವರದ ಭೀತಿ ಹೆಚ್ಚಾಗಿದ್ದು, ಪ್ರತಿ ವರ್ಷವೂ ಇದೇ ಸಮಸ್ಯೆ ಮರುಕಳಿಸುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ ಆವರಣದ ನೆಲವನ್ನು ಸಮತಟ್ಟುಗೊಳಿಸಿ, ಸೂಕ್ತ ನೆಲಹಾಸು ಅಳವಡಿಸುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ್ ಮೇಸ್ತ ಶಿರೂರು ಸಲಹೆ ನೀಡಿದ್ದಾರೆ.

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಸಂಬಂಧಿತ ಇಲಾಖೆಗಳು ನಿರ್ಲಕ್ಷ್ಯ ತೊರೆದು ಕೂಡಲೇ ಸ್ವಚ್ಛತಾ ಕಾರ್ಯಾಚರಣೆ ನಡೆಸಬೇಕು. ಗಿಡಗಂಟಿಗಳ ತೆರವು, ಕಸ ವಿಲೇವಾರಿ ಹಾಗೂ ಸೊಳ್ಳೆ ನಿಯಂತ್ರಣ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರ ಆರೋಗ್ಯವನ್ನು ಕಾಪಾಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

Ads on article

Advertise in articles 1

advertising articles 2

Advertise under the article