ಬ್ರಹ್ಮಾವರ ಮೊಗವೀರ ಯುವ ಸಂಘಟನೆಯಿಂದ ಸ್ಮಶಾನ ಸ್ವಚ್ಛತಾ ಕಾರ್ಯ
Saturday, June 06, 2026
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮೊಗವೀರ ಯುವ ಸಂಘಟನೆ ಬ್ರಹ್ಮಾವರ ಘಟಕ ಹಾಗೂ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಬೈಕಾಡಿ ಗಾಂಧಿನಗರದ ಸ್ಮಶಾನ ಪ್ರದೇಶದಲ್ಲಿ ಪರಿಸರ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಂಗವಾಗಿ ಸ್ಮಶಾನದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ, ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು. ಅಲ್ಲದೆ ಫಲ ನೀಡುವ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಟ್ಟು ಹಸಿರು ವಾತಾವರಣ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮೊಗವೀರ ಯುವ ಸಂಘಟನೆಯ ಜಿಲ್ಲಾ ಅಧ್ಯಕ್ಷ ರವೀಶ್ ಕೊರವಡಿ, ಜಿಲ್ಲಾ ಕಾರ್ಯದರ್ಶಿ ಶೇಖರ್ ತೋಲಾರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕುಮಾರ್ ಸುವರ್ಣ, ಸಂಘಟನೆಯ ಮಾರ್ಗದರ್ಶಕ ಕಿಟ್ಟಪ್ಪ ಅಮೀನ್, ಮಾಜಿ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಹಿರಿಯಡ್ಕ ಉಪಸ್ಥಿತರಿದ್ದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಮತ್ತು ಹಸಿರು ವಾತಾವರಣ ನಿರ್ಮಾಣಕ್ಕೆ ಇಂತಹ ಕಾರ್ಯಕ್ರಮಗಳು ಮಾದರಿಯಾಗಿವೆ ಎಂದು ಸಂಘಟನೆಯ ಪದಾಧಿಕಾರಿಗಳು ಅಭಿಪ್ರಾಯಪಟ್ಟರು. ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಸಂಘಟನೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
