-->
ಕೆಮ್ಮಣ್ಣು: ಬಾವಿಗೆ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಸಾವು

ಕೆಮ್ಮಣ್ಣು: ಬಾವಿಗೆ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಸಾವು


ಬಾವಿಯ ಮೇಲ್ಭಾಗಕ್ಕೆ ಹಾಕಿದ್ದ ಬಲೆಯ ಮೇಲಿನ ಕಸವನ್ನು ಸ್ವಚ್ಛಗೊಳಿಸುವ ವೇಳೆ ಕಾಲು ಜಾರಿ ಬಾವಿಗೆ ಬಿದ್ದಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಎಂಬಲ್ಲಿ ನಡೆದಿದೆ.

ಮೃತರನ್ನು ಪಡುತೋನ್ಸೆ ಗ್ರಾಮದ ಶ್ಯಾಮಲ ಜಿ. ಹೆಗ್ಡೆ (68) ಎಂದು ಗುರುತಿಸಲಾಗಿದೆ.

ಜೂನ್ 3ರಂದು ಮಧ್ಯಾಹ್ನ ಸುಮಾರು 12.30 ಗಂಟೆಗೆ ಶ್ಯಾಮಲ ಹೆಗ್ಡೆ ಅವರು ತಮ್ಮ ಮನೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಬಾವಿಯ ಮೇಲೆ ಅಳವಡಿಸಿದ್ದ ಬಲೆಯ ಮೇಲೆ ಬಿದ್ದಿದ್ದ ಕಸವನ್ನು ತೆರವುಗೊಳಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಕಾಲು ಜಾರಿ ತಲೆಕೆಳಗಾಗಿ ಬಾವಿಯ ನೀರಿಗೆ ಬಿದ್ದಿದ್ದಾರೆ.

ಶ್ಯಾಮಲ ಹೆಗ್ಡೆ ಅವರ ಕೂಗಾಟ ಕೇಳಿ ಅವರ ಪತಿ ರಕ್ಷಿಸಲು ಮುಂದಾಗಿದ್ದು, ಬಾವಿಯ ಹಗ್ಗದ ಸಹಾಯದಿಂದ ಒಳಗೆ ಇಳಿಯಲು ಪ್ರಯತ್ನಿಸಿದ್ದಾರೆ. ಆದರೆ ಹಗ್ಗ ತುಂಡಾದ ಪರಿಣಾಮ ಅವರೂ ಬಾವಿಯೊಳಗೆ ಬಿದ್ದಿದ್ದಾರೆ.

ಸ್ಥಳೀಯರು ತಕ್ಷಣ ಧಾವಿಸಿ ಇಬ್ಬರನ್ನೂ ಬಾವಿಯಿಂದ ಮೇಲಕ್ಕೆತ್ತಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಈ ವೇಳೆ ಪತಿ ಮಾತನಾಡುವ ಸ್ಥಿತಿಯಲ್ಲಿದ್ದರೆ, ಶ್ಯಾಮಲ ಹೆಗ್ಡೆ ಅವರ ಸ್ಥಿತಿ ಗಂಭೀರವಾಗಿತ್ತು. ಬಳಿಕ ಇಬ್ಬರನ್ನೂ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಚಿಕಿತ್ಸೆಯಿಂದ ಪತಿ ಗುಣಮುಖರಾಗಿದ್ದರೂ, ಶ್ಯಾಮಲ ಹೆಗ್ಡೆ ಅವರು ಚೇತರಿಸಿಕೊಳ್ಳಲಿಲ್ಲ. ಅವರನ್ನು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ಮಧ್ಯಾಹ್ನ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಈ ಸಂಬಂಧ ಮೃತರ ಅಳಿಯ ದೀಪಕ್ ಕೆ. ಶೆಟ್ಟಿ ನೀಡಿದ ಮಾಹಿತಿಯ ಮೇರೆಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article