ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಕಮೆಂಟ್ ಮಾಡಿದವನ ಬಂಧನ
ಸಾಮಾಜಿಕ ಜಾಲತಾಣದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಹಾಗೂ ದ್ವೇಷಪೂರಿತ ಕಾಮೆಂಟ್ ಮಾಡಿರುವ ಆರೋಪದಡಿ ಕಾರ್ಕಳ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಸುರೇಶ್ ಎಂಬವರು ನೀಡಿದ ದೂರಿನ ಪ್ರಕಾರ, "NAMMA KARLA" ಎಂಬ ಫೇಸ್ಬುಕ್ ಪುಟದಲ್ಲಿ ಗೃಹ ಸಚಿವರ ಕುರಿತಾದ ಪೋಸ್ಟ್ಗೆ ಸುದೀರ್ ಬಂಗೇರ ಎಂಬಾತ ಅವಹೇಳನಕಾರಿ ಕಾಮೆಂಟ್ ಮಾಡಿದ್ದ. ಆರೋಪಿಯು ಸಚಿವರ ಜಾತಿಯನ್ನು ಉಲ್ಲೇಖಿಸಿ ನಿಂದನಾತ್ಮಕ ಪದಗಳನ್ನು ಬಳಸಿರುವುದಲ್ಲದೆ, ವಿವಿಧ ಸಮುದಾಯಗಳ ನಡುವೆ ದ್ವೇಷ, ವೈರತ್ವ ಮತ್ತು ಸಾಮಾಜಿಕ ಅಶಾಂತಿ ಉಂಟುಮಾಡುವ ಉದ್ದೇಶದಿಂದ ಕಾಮೆಂಟ್ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಆಧಾರದ ಮೇಲೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 82/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 351(3), 196 ಹಾಗೂ 353(2) ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಕಲಂ 3(1)(r) ಹಾಗೂ 3(1)(u) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ತನಿಖೆ ಕೈಗೊಂಡ ಕಾರ್ಕಳ ನಗರ ಪೊಲೀಸರು ಆರೋಪಿಯಾಗಿರುವ ಕೆರ್ವಾಶೆ ಗ್ರಾಮದ ನಲ್ಕೆದಬೆಟ್ಟು ನಿವಾಸಿ ಸುದೀರ್ ಬಂಗೇರ (48) ಎಂಬಾತ ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.