ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಆಗ್ರಹಿಸಿ ಜು.27ರಂದು ಜಿಲ್ಲಾಧಿಕಾರಿಗೆ ಮನವಿ
ಗೋಮಾತೆ ರಕ್ಷಣೆ ಹಾಗೂ ದೇಶಾದ್ಯಂತ ಏಕರೂಪದ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಆಗ್ರಹಿಸಿ ‘ಗೋಮಾತೆಯ ಗೌರವದ ಅಭಿಯಾನ’ದ ಅಂಗವಾಗಿ ಜುಲೈ 27ರಂದು ಜಿಲ್ಲಾಧಿಕಾರಿ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಶ್ರೀಕ್ಷೇತ್ರ ಶಂಕರಪುರದ ದ್ವಾರಕಾಮಾಯಿ ಮಠದ ಶ್ರೀಸಾಯಿ ಈಶ್ವರ್ ಗುರೂಜಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗೋಮಾತೆಗೆ ರಾಷ್ಟ್ರ ತಾಯಿ, ರಾಷ್ಟ್ರೀಯ ದೇವರು ಹಾಗೂ ರಾಷ್ಟ್ರೀಯ ಪರಂಪರೆಯ ಗೌರವ ನೀಡಬೇಕೆಂಬ ಉದ್ದೇಶದಿಂದ ದೇಶದಾದ್ಯಂತ ನಾಲ್ಕು ಹಂತಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ತಾಲೂಕು ಮಟ್ಟದಲ್ಲಿ ನಡೆದ ಮೊದಲ ಹಂತದ ಸಹಿ ಸಂಗ್ರಹ ಅಭಿಯಾನ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದೀಗ ಜಿಲ್ಲಾಮಟ್ಟದ ಎರಡನೇ ಹಂತದ ಅಭಿಯಾನ ನಡೆಯುತ್ತಿದೆ. ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಪ್ರಚಾರಕರ ಮೂಲಕ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಜುಲೈ 27ರಂದು ಬೆಳಗ್ಗೆ 10.30ಕ್ಕೆ ಜಿಲ್ಲೆಯ ಏಳು ತಾಲೂಕುಗಳ ಗೋಪ್ರೇಮಿಗಳು, ಗೋರಕ್ಷಕರು ಹಾಗೂ ಭಕ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಅಭಿಯಾನದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಂಚಾಲಕ ಗಜೇಂದ್ರ ಎಸ್. ಬೇಲೆಮನೆ, ನಾಗರಾಜ್ ಪೂಜಾರಿ ಅವರ ಸಹಕಾರದೊಂದಿಗೆ ಕರಾವಳಿ ಭಾಗದಲ್ಲಿ ಕರಪತ್ರ ವಿತರಣೆ ಹಾಗೂ ಸಹಿ ಸಂಗ್ರಹ ಅಭಿಯಾನ ಈಗಾಗಲೇ ಆರಂಭಗೊಂಡಿದ್ದು, ಮೂರು ಲಕ್ಷ ಜನರ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಅಕ್ಟೋಬರ್‌ನಲ್ಲಿ ರಾಜ್ಯಮಟ್ಟದ ಅಭಿಯಾನ ಹಾಗೂ 2027ರ ಜನವರಿಯಲ್ಲಿ ದೆಹಲಿಯಲ್ಲಿ ರಾಷ್ಟ್ರಮಟ್ಟದ ಅಭಿಯಾನ ನಡೆಯಲಿದ್ದು, 2027ರ ಫೆಬ್ರುವರಿ 27ರೊಳಗೆ ಕೇಂದ್ರ ಸರ್ಕಾರ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೊಳಿಸದಿದ್ದಲ್ಲಿ 108 ಸಾಧು-ಸಂತರು ದೆಹಲಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ತಾಲೂಕು ಸಂಚಾಲಕ ವಿಜಯ ಕೊಡವೂರು, ನಾಗರಾಜ್ ಪೂಜಾರಿ ಬೈಂದೂರು ಹಾಗೂ ಶ್ರೀಮಠದ ಸತೀಶ್ ಉಪಸ್ಥಿತರಿದ್ದರು.