ಉಡುಪಿ ಜಿಲ್ಲೆಯ ಕಸ ವಿಲೇವಾರಿ ಘಟಕಗಳಲ್ಲಿ ಮರುಕಳಿಸುತ್ತಿರುವ ಅಗ್ನಿ ಅವಘಡ: ಸಮಗ್ರ ತನಿಖೆಗೆ ಒತ್ತಾಯ
ಉಡುಪಿ ಜಿಲ್ಲೆಯ ವಿವಿಧ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಪದೇ ಪದೇ ಸಂಭವಿಸುತ್ತಿರುವ ಬೆಂಕಿ ಅವಘಡಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಸಮಗ್ರ ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಕುಚ್ಚೂರು ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟೇಶ್ವರ, ವಾರಂಬಳ್ಳಿ, ಹೆಬ್ರಿ ತಾಲೂಕಿನ ಬೆಳ್ವೆಯ ಎಸ್‌ಎಲ್‌ಆರ್‌ಎಂ (SLRM) ಘಟಕ, ಹೆಬ್ರಿ ತಾಲೂಕಿನ 16 ಗ್ರಾಮಗಳಿಗೆ ಸಂಬಂಧಿಸಿದ ಎಂಆರ್‌ಎಫ್ (MRF) ಘಟಕ ಹಾಗೂ ಕಾರ್ಕಳ ಪುರಸಭೆ ವ್ಯಾಪ್ತಿಯ ಕರಿಯಕಲ್ಲಿನ ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ ಅವಘಡಗಳು ಸಂಭವಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಘಟಕಗಳಲ್ಲಿ ಕೇವಲ ಕಸ ತ್ಯಾಜ್ಯ ಮಾತ್ರವಲ್ಲದೆ, ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು, ಮೆಷಿನರಿಗಳು ಹಾಗೂ ಕಟ್ಟಡಗಳು ಸುಟ್ಟುಹೋಗುತ್ತಿರುವುದು ಗಂಭೀರ ವಿಷಯವಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ಸಿಗದೆ, ಹಾರಿಕೆಯ ರೀತಿಯ ಸ್ಪಷ್ಟೀಕರಣಗಳನ್ನು ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಹೆಬ್ರಿಯ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಬೇಸಿಗೆಯ ಬಿಸಿಲಿನ ಶಾಖದಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಮಳೆಗಾಲದಲ್ಲಿಯೂ ಕಾರ್ಕಳದ ಕರಿಯಕಲ್ಲಿನ ಡಂಪಿಂಗ್ ಯಾರ್ಡ್‌ಗೆ ಬೆಂಕಿ ಕಾಣಿಸಿಕೊಂಡಿರುವುದಕ್ಕೆ ಏನು ಕಾರಣ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ ಎಂದು ಪ್ರಶ್ನಿಸಿದರು.
ಸಾರ್ವಜನಿಕರ ತೆರಿಗೆ ಹಣದಿಂದ ಸ್ವಚ್ಛ ಭಾರತ್ ಯೋಜನೆಯಡಿ ನಿರ್ಮಿಸಲಾದ ಈ ಘಟಕಗಳಿಗೆ ಪದೇ ಪದೇ ಬೆಂಕಿ ಬೀಳುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ. ಬೆಂಕಿಯಿಂದ ಹಾನಿಗೊಳಗಾದ ಘಟಕಗಳನ್ನು ಮರುನಿರ್ಮಿಸಲು ಮತ್ತೆ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಮಗ್ರ ಹಾಗೂ ಪಾರದರ್ಶಕ ತನಿಖೆ ನಡೆಸಿ, ಸಾರ್ವಜನಿಕರಲ್ಲಿ ಮೂಡಿರುವ ಅನುಮಾನಗಳಿಗೆ ಉತ್ತರ ನೀಡಬೇಕು ಎಂದು ಶ್ರೀಕಾಂತ್ ಕುಚ್ಚೂರು ಆಗ್ರಹಿಸಿದರು.