ಕುಕ್ಕೆಹಳ್ಳಿ ಆದಿಮಾಯೆ ಮೂಕಾಂಬಿಕಾ–ಸ್ವಾಮಿ ಕೊರಗಜ್ಜ ಮೇಳ ಆರಂಭ: ನವೆಂಬರ್‌ನಿಂದ ಪ್ರಥಮ ಬಯಲಾಟ
ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಆದಿಮಾಯೆ ಮೂಕಾಂಬಿಕಾ ಕ್ಷೇತ್ರ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನದ ಆಶ್ರಯದಲ್ಲಿ "ಆದಿಮಾಯೆ ಮೂಕಾಂಬಿಕಾ – ಸ್ವಾಮಿ ಕೊರಗಜ್ಜ ಕೃಪಾಪೋಷಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಕುಕ್ಕೆಹಳ್ಳಿ" ವತಿಯಿಂದ ಪ್ರಥಮ ಯಕ್ಷಗಾನ ಬಯಲಾಟವು ಈ ವರ್ಷದ ನವೆಂಬರ್ ತಿಂಗಳಿನಿಂದ ಆರಂಭವಾಗಲಿದೆ ಎಂದು ಮೇಳದ ಯಜಮಾನ ಡಾ. ಕೆ. ಕೃಷ್ಣ ಕುಲಾಲ್ ತಿಳಿಸಿದ್ದಾರೆ.
ಈ ಕುರಿತು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಸ್ವಾಮಿ ಕೊರಗಜ್ಜ ದೈವ ಹಾಗೂ ಆದಿಮಾಯೆ ಮೂಕಾಂಬಿಕಾ ದೇವಿಯ ಅಪ್ಪಣೆಯಂತೆ ಶ್ರೀ ಕ್ಷೇತ್ರ ಕುಕ್ಕೆಹಳ್ಳಿಯ ವತಿಯಿಂದ ನೂತನ ಯಕ್ಷಗಾನ ಮಂಡಳಿಯನ್ನು ಆರಂಭಿಸಲಾಗುತ್ತಿದೆ ಎಂದರು.
ಈ ನೂತನ ಮಂಡಳಿಯಲ್ಲಿ ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ ಸಮ್ಮಿಲನದೊಂದಿಗೆ ಅನುಭವಿ ಮತ್ತು ನುರಿತ ಕಲಾವಿದರನ್ನು ಒಳಗೊಂಡ ತಂಡ ಪ್ರದರ್ಶನ ನೀಡಲಿದ್ದು, ಹೊಸ ವೇಷಭೂಷಣಗಳು, ಆಕರ್ಷಕ ರಂಗಸಜ್ಜಿಕೆ ಹಾಗೂ ಉನ್ನತ ಮಟ್ಟದ ಹಿಮ್ಮೇಳದೊಂದಿಗೆ ಪ್ರೇಕ್ಷಕರ ಮನಸೆಳೆಯುವ ರೀತಿಯಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಕ್ಷೇತ್ರದ ಮಹಿಮೆಯನ್ನು ಸಾರುವ ವಿಶೇಷ ಪ್ರಸಂಗಗಳ ಜೊತೆಗೆ ಪೌರಾಣಿಕ ಹಾಗೂ ಸಾಮಾಜಿಕ ಕಥಾವಸ್ತುಗಳನ್ನು ಒಳಗೊಂಡ ಯಕ್ಷಗಾನ ಪ್ರಸಂಗಗಳನ್ನು ಹೆಸರಾಂತ ಕಲಾವಿದರ ಅಭಿನಯದಲ್ಲಿ ಪ್ರದರ್ಶಿಸುವ ಯೋಜನೆ ರೂಪಿಸಲಾಗಿದೆ. ಗುಣಮಟ್ಟದ ಪ್ರದರ್ಶನಗಳ ಮೂಲಕ ಯಕ್ಷಗಾನ ಕಲೆಯ ಸಂರಕ್ಷಣೆ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರಸಾರಕ್ಕೆ ಮಂಡಳಿ ಬದ್ಧವಾಗಿದೆ ಎಂದು ಅವರು ಹೇಳಿದರು. ನವೆಂಬರ್ ತಿಂಗಳಿಂದ ಆರಂಭಗೊಳ್ಳುವ ಈ ನೂತನ ಯಕ್ಷಗಾನ ಮೇಳಕ್ಕೆ ಯಕ್ಷಗಾನ ಅಭಿಮಾನಿಗಳು ಹಾಗೂ ಸಾರ್ವಜನಿಕರು ಸಹಕಾರ, ಪ್ರೋತ್ಸಾಹ ಮತ್ತು ಆಶೀರ್ವಾದ ನೀಡುವಂತೆ ಡಾ. ಕೆ. ಕೃಷ್ಣ ಕುಲಾಲ್ ಮನವಿ ಮಾಡಿದ್ದಾರೆ.
ಮೇಳದ ಪ್ರಬಂಧಕ ಅರುಣ್ ಕುಮಾರ್ ಜಾರ್ಕಳ ಮಾತನಾಡಿ, ಶ್ರೀ ಆದಿಮಾಯೆ ಮೂಕಾಂಬಿಕಾ ಸ್ವಾಮಿ ಕೊರಗಜ್ಜ ಕೃಪಾಪೋಷಿತ ಯಕ್ಷಗಾನ ಮಂಡಳಿಯು ನವೆಂಬರ್ ತಿಂಗಳ ಎರಡನೇ ವಾರದಿಂದ ಪ್ರಸಕ್ತ ಸಾಲಿನ ಯಕ್ಷಗಾನ ತಿರುಗಾಟವನ್ನು ಆರಂಭಿಸಲಿದೆ. ಮೇಳದಲ್ಲಿ ಸುಮಾರು 32 ರಿಂದ 33 ಮಂದಿ ಕಲಾವಿದರು ಸೇವೆ ಸಲ್ಲಿಸುತ್ತಿದ್ದು, ಯಕ್ಷಗಾನ ಕಲೆಯ ಮೂಲಕ ಪ್ರೇಕ್ಷಕರಿಗೆ ಮನರಂಜನೆ ಹಾಗೂ ಧಾರ್ಮಿಕ-ಸಾಂಸ್ಕೃತಿಕ ಸಂದೇಶವನ್ನು ನೀಡುವ ಉದ್ದೇಶ ಹೊಂದಲಾಗಿದೆ ಎಂದರು.
ಮೇಳದ ಭಾಗವತರಾಗಿ ಆರ್.ಡಿ. ಸಂತೋಷ ಕುಮಾರ್ ಹಾಗೂ ಸುರೇಶ್ ನಾಯ್ಕ ಕನ್ನಾರು, ಸಂಗೀತ ವಿಭಾಗದಲ್ಲಿ ಕಿಶನ್ ಪೂಜಾರಿ ಬಾಳೆಹಿತ್ಲು, ಮದ್ದಳೆ ವಾದಕರಾಗಿ ಶಶಿಕುಮಾರ್ ಆಚಾರ್ಯ ಬೆಳ್ಳಲೆ ಹಾಗೂ ವಿಶ್ವನಾಥ ಭಟ್ ಬೆಂಗಳೂರು, ಚೆಂಡೆ ವಾದಕರಾಗಿ ರಾಕೇಶ್ ಮಲ್ಯ ಹಳ್ಳಾಡಿ ಹಾಗೂ ಮಂಜುನಾಥ ನಾವಡ ಕರೆ ಸೇವೆ ಸಲ್ಲಿಸಲಿದ್ದಾರೆ. ಮುಮ್ಮೇಳದಲ್ಲಿ ಜನಾರ್ದನ ಗುಡಿಗಾರ, ಅರಳಿಸುರುಳಿ ಚಂದ್ರ ಶೆಟ್ಟಿ, ಅಕ್ಷಯ್ ಗೌಡ ಕೌಲದ್ದ, ದಿನೇಶ್ ಕನ್ನಾರು, ಗುರುಪ್ರಸಾದ್ ಸರಳಾಯ, ಪ್ರಕಾಶ್ ನಾಯ್ಕ ಹೆಗ್ಗೋಡು, ರವೀಂದ್ರ ನಾಯ್ಕ ಬಾಡ, ಅಮೃತ್ ಪುತ್ತೆ, ಜಿತೇಶ್ ನಾಯಕ್ ಮೂಡಬಿದ್ರೆ, ಶ್ಯಾಮ್ ಗೌಡ ತಲ್ಲೂರಂಗಡಿ, ದೀಪಕ್ ಹೆಗಡೆ ಶೃಂಗೇರಿ ಹಾಗೂ ಅಭಿಷೇಕ ಕಡೆಗದ್ದೆ ಕಲಾವಿದರಾಗಿ ಭಾಗವಹಿಸಲಿದ್ದಾರೆ ಎಂದರು.
ಸ್ತ್ರೀ ವೇಷದಲ್ಲಿ ಜಯರಾಮ ಕೊಠಾರಿ, ಯೋಗೀಶ್ ನೇರಳಕಟ್ಟೆ, ಶ್ರೀಶ ನಾಯಕ್ ಪರ್ಕಳ ಹಾಗೂ ಅರುಣ್ ನಾಯಕ್ ಪರ್ಕಳ ಅಭಿನಯಿಸಲಿದ್ದು, ಹಾಸ್ಯ ವಿಭಾಗದಲ್ಲಿ ಅರುಣ್ ಕುಮಾರ್ ಜಾರ್ಕಳ ಹಾಗೂ ರತೀಶ್ ಶೆಟ್ಟಿ ಹಳ್ಳಾಡಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಮೇಳದ ಅರ್ಚಕರಾಗಿ ಶ್ರೀ ಗುರು ಭಟ್ ಪೆರ್ಲ ಸೇವೆ ಸಲ್ಲಿಸಲಿದ್ದಾರೆ. ರಂಗ ಸಹಾಯಕರಾಗಿ ಕಮಲಾಕ್ಷ, ಉದಯ, ಶರತ್, ಮಹೇಂದ್ರ ಹಾಗೂ ಮೇಘರಾಜ ಮಲ್ಲಿಕಾರ್ಜುನ ಕಾರ್ಯನಿರ್ವಹಿಸಲಿದ್ದಾರೆ. ಪಿ.ವಿ. ಆನಂದ ಸಾಲಿಗ್ರಾಮ ಅವರು ರಚಿಸಿದ “ಕುಕ್ಕೆಹಳ್ಳಿ ಆದಿಮಾಯೆ ಸ್ವಾಮಿ ಕೊರಗಜ್ಜ ಮಹಾತ್ಮೆ” ಎಂಬ ಯಕ್ಷಗಾನದ ಜೊತೆಗೆ, ದೇವದಾಸ್ ಈಶ್ವರಮಂಗಲ ಅವರು ರಚಿಸಿದ “ವೈಭವ ಸೂರ್ಯವಂಶಿ” ಎಂಬ ಕಥಾ ಪ್ರಸಂಗದ ಪ್ರದರ್ಶನವೂ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ದೇವದಾಸ್ ಈಶ್ವರಮಂಗಲ, ಆರ್ಡಿ ಸಂತೋಷ್ ಕುಮಾರ್ ಹಾಗೂ ಶಶಿಕುಮಾರ್ ಆಚಾರ್ಯ ಬೆಳ್ಕಲೆ ಉಪಸ್ಥಿತರಿದ್ದರು.
