ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ರೂ. 10 ಲಕ್ಷ ಬೇಡಿಕೆ: ಮೂವರ ಸೆರೆ
ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ರೂ. 10 ಲಕ್ಷಕ್ಕೆ ಬೇಡಿಕೆ ಇಟ್ಟು, 2 ಲಕ್ಷ ರೂ ಪಡೆದು, ಉಳಿದ ಹಣಕ್ಕಾಗಿ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ಮೂವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಬೈಂದೂರು ನಿವಾಸಿ ಹಾಗೂ ಉಡುಪಿ ನಗರಸಭೆಯ ಪ್ರಭಾರ ಮೇಲ್ವಿಚಾರಕರಾಗಿರುವ ಯೋಗೀಶ್ (34) ಅವರು 2021ರಲ್ಲಿ ಪದೋನ್ನತಿ ಹೊಂದಿದ ಬಳಿಕ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಗರಸಭೆಯ ಪೌರ ಕಾರ್ಮಿಕ ಯೋಗೀಶ್ ಪ್ರಭು, ಹೊರಗುತ್ತಿಗೆ ಚಾಲಕ ವಿನಯ್ ಕುಮಾರ್ ಹಾಗೂ ಪೌರ ಕಾರ್ಮಿಕೆ ಸ್ಮಿತಾ ಬಿ. ಬಂಗೇರ ಅವರು ತಮ್ಮನ್ನು ಅನುಕೂಲಕರ ಕರ್ತವ್ಯಕ್ಕೆ ನಿಯೋಜಿಸುವಂತೆ ಒತ್ತಾಯಿಸುತ್ತಿದ್ದರು. ಬೇಡಿಕೆಗೆ ಒಪ್ಪದಿದ್ದರೆ ಸ್ಮಿತಾ ಬಂಗೇರ ಮೂಲಕ ಲೈಂಗಿಕ ಕಿರುಕುಳದ ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿ 10 ಲಕ್ಷ ರೂ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬೆದರಿಕೆಯಿಂದಾಗಿ 2 ಲಕ್ಷ ರೂ ನಗದು ನೀಡಿದ್ದು, ಬಳಿಕ ಉಳಿದ ರೂ. 8 ಲಕ್ಷಕ್ಕಾಗಿ ಆರೋಪಿಗಳು ನಿರಂತರ ಒತ್ತಡ ಹೇರಿದ್ದಾರೆ. ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ 2026ರ ಜನವರಿ 29ರಂದು ಸ್ಮಿತಾ ಬಿ. ಬಂಗೇರ ಹೆಸರಿನಲ್ಲಿ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ, ಈ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದಿರುವುದಾಗಿಯೂ ಅವರು ತಿಳಿಸಿದ್ದು, ಜೂನ್ 30ರಂದು ಮೊಬೈಲ್ ಕರೆ ಮಾಡಿ ಉಳಿದ ರೂ. 8 ಲಕ್ಷ ನೀಡದಿದ್ದರೆ ಮತ್ತೊಂದು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿದೆ. ಅಲ್ಲದೆ ಜುಲೈ 6ರಂದು ಮಣಿಪಾಲ ಪೆರಂಪಳ್ಳಿ ವೃತ್ತದಲ್ಲಿ ಯೋಗೀಶ್ ಪ್ರಭು ಅವಾಚ್ಯವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.