-->
ಉಡುಪಿ, ಮಣಿಪಾಲದಲ್ಲಿ ಪೊಲೀಸರಿಂದ ಬೆಳ್ಳಂಬೆಳಗ್ಗೆ ಶಾಲಾ ಬಸ್‌ಗಳ  ದಿಢೀರ್ ತಪಾಸಣೆ

ಉಡುಪಿ, ಮಣಿಪಾಲದಲ್ಲಿ ಪೊಲೀಸರಿಂದ ಬೆಳ್ಳಂಬೆಳಗ್ಗೆ ಶಾಲಾ ಬಸ್‌ಗಳ ದಿಢೀರ್ ತಪಾಸಣೆ


ಇತ್ತೀಚೆಗೆ ಶಾಲಾ ಬಸ್‌ಗಳ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವುದು ಹಾಗೂ ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಉಡುಪಿ ಹಾಗೂ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ ಪೊಲೀಸರು ಶಾಲಾ ಬಸ್‌ಗಳನ್ನು ದಿಢೀರ್ ತಪಾಸಣೆ ನಡೆಸಿದರು.


ತಪಾಸಣೆ ವೇಳೆ ಶಾಲಾ ವಾಹನಗಳಲ್ಲಿ ಕಡ್ಡಾಯ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿದೆಯೇ, ವಾಹನಗಳಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಸಾಗಿಸಲಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದರು. ಅಲ್ಲದೆ, ಚಾಲಕರ ಚಾಲನಾ ಪರವಾನಗಿ (DL), ವಾಹನದ ಫಿಟ್‌ನೆಸ್ ಪ್ರಮಾಣಪತ್ರ (FC), ವಿಮೆ (Insurance), ಆರ್‌ಟಿಒ ಪರ್ಮಿಟ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಯಿತು.

ಇತ್ತೀಚೆಗೆ ಮಣಿಪಾಲದಲ್ಲಿ ಖಾಸಗಿ ಶಾಲೆಯ ಬಸ್ ಅಪಘಾತಕ್ಕೀಡಾಗಿದ್ದು, ಬಸ್‌ನ ಕಂಡಕ್ಟರ್ ಚಾಲನಾ ಪರವಾನಗಿ ಇಲ್ಲದೇ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಪ್ರಮುಖ ಕಾರಣ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಪೊಲೀಸರು ಶಾಲಾ ವಾಹನಗಳ ಮೇಲೆ ವಿಶೇಷ ನಿಗಾ ವಹಿಸಿ ವ್ಯಾಪಕ ತಪಾಸಣೆ ನಡೆಸುತ್ತಿದ್ದಾರೆ.

ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಶಾಲಾ ವಾಹನಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದು, ಶಾಲಾ ಆಡಳಿತ ಮಂಡಳಿಗಳು ಹಾಗೂ ವಾಹನ ಮಾಲೀಕರು ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದ್ದಾರೆ.

Ads on article

Advertise in articles 1

advertising articles 2

Advertise under the article