ಬ್ರಹ್ಮಾವರದಲ್ಲಿ ಭೀಕರ ರಸ್ತೆ ಅಪಘಾತ: ಖ್ಯಾತ ಹುಲಿವೇಷ ಕಲಾವಿದ ಸಾವು
Wednesday, July 01, 2026
ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಹುಲಿ ವೇಷದ ಕಲಾವಿದರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಂತೆಕಟ್ಟೆ ಲಕ್ಷ್ಮಿನಗರದ ನಿವಾಸಿ ಮಂಜುನಾಥ್ (43) ಮೃತ ದುರ್ದೈವಿ. ಸಂತೆಕಟ್ಟೆ ಲಕ್ಷ್ಮಿನಗರದ ಐದು ಮಂದಿ ಯುವಕರು ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ತೆರಳಿ ವಾಪಾಸ್ ಮನೆಗೆ ಮರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಉಡುಪಿಯತ್ತ ತೆರಳುತ್ತಿದ್ದ ವೇಗದೂತ ಬಸ್ ದಿಡೀರ್ ಬ್ರೇಕ್ ಹಾಕಿದ ಪರಿಣಾಮ, ಹಿಂದಿನಿಂದ ಬರುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಬಸ್ ಹಿಂಭಾಗಕ್ಕೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ಉಳಿದ ನಾಲ್ವರು ಯುವಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಮೃತ ಮಂಜುನಾಥ್ ಅವರು ಕಳೆದ ಹಲವು ವರ್ಷಗಳಿಂದ ತುಳುನಾಡಿನ ಪ್ರಸಿದ್ಧ ಹುಲಿ ವೇಷ ಕಲೆಯಲ್ಲಿ ತೊಡಗಿಸಿಕೊಂಡಿದ್ದು, ಅನೇಕ ಹುಲಿ ವೇಷ ಕಲಾವಿದರಿಗೆ ಪೈಂಟಿಂಗ್ ಹಾಗೂ ಕಲಾ ಸೇವೆ ನೀಡಿದ್ದರು.
ಘಟನಾ ಸ್ಥಳಕ್ಕೆ ಬ್ರಹ್ಮಾವರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.