-->
ಮಂಗಳೂರು ದರೋಡೆ ಪ್ರಕರಣ: ಅಪಹೃತ ಕಾರು ಪತ್ತೆ, ಆರೋಪಿಗಳಿಗಾಗಿ ಶೋಧ

ಮಂಗಳೂರು ದರೋಡೆ ಪ್ರಕರಣ: ಅಪಹೃತ ಕಾರು ಪತ್ತೆ, ಆರೋಪಿಗಳಿಗಾಗಿ ಶೋಧ


ಮಂಗಳೂರು ಬೈಕಂಪಾಡಿ ಬಳಿ ನಡೆದಿದ್ದ ಚಿನ್ನಾಭರಣ ವ್ಯಾಪಾರಿಯ ಮೇಲಿನ ಸಿನಿಮೀಯ ಶೈಲಿಯ ದರೋಡೆ ಪ್ರಕರಣದ ತನಿಖೆಗೆ ಮಹತ್ವದ ತಿರುವು ಸಿಕ್ಕಿದೆ. ದರೋಡೆಕೋರರು ವ್ಯಾಪಾರಿಯಿಂದ ಅಪಹರಿಸಿಕೊಂಡು ಹೋಗಿದ್ದ ಐಷಾರಾಮಿ ಕಾರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಜನಪದವಿನಲ್ಲಿ ಪತ್ತೆಯಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೊಲೀಸರು ಕಾರನ್ನು ಪರಿಶೀಲಿಸಿದ ವೇಳೆ ದರೋಡೆಕೋರರ ಕೃತ್ಯದ ಕ್ರೌರ್ಯ ಬೆಳಕಿಗೆ ಬಂದಿದೆ. ವ್ಯಾಪಾರಿ ಕಾರಿನ ಗುಪ್ತ ಜಾಗದಲ್ಲಿ ಚಿನ್ನವನ್ನು ಅಡಗಿಸಿಟ್ಟಿರಬಹುದೆಂಬ ಶಂಕೆಯಿಂದ ಕಾರಿನ ಸೀಟ್ ಕವರ್‌ಗಳನ್ನು ಹರಿದು ಹಾಕಿ, ವಾಹನವನ್ನು ಸಂಪೂರ್ಣವಾಗಿ ಶೋಧಿಸಿ ಧ್ವಂಸಗೊಳಿಸಿರುವುದು ಕಂಡುಬಂದಿದೆ. ಆದಾಗ್ಯೂ, ದರೋಡೆಕೋರರಿಗೆ ಹೆಚ್ಚುವರಿ ಚಿನ್ನ ಸಿಕ್ಕಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದೇ ವೇಳೆ, ವ್ಯಾಪಾರಿಯಿಂದ ಕಸಿದುಕೊಳ್ಳಲಾಗಿದ್ದ ಮೊಬೈಲ್ ಫೋನ್ ಇನ್ನೂ ಪತ್ತೆಯಾಗಿಲ್ಲ. ಕೃತ್ಯದ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿರುವ ಹಿನ್ನೆಲೆಯಲ್ಲಿ ಆರೋಪಿಗಳು ಅದನ್ನು ಎಲ್ಲಾದರೂ ಎಸೆದಿರುವ ಅಥವಾ ನಾಶಪಡಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೊಬೈಲ್ ಟವರ್ ಡಂಪ್ ತಂತ್ರಜ್ಞಾನದ ನೆರವಿನಿಂದ ಆರೋಪಿಗಳ ಚಲನವಲನದ ಸುಳಿವು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.

ಸೋಮವಾರ ಮುಂಜಾನೆ ಸುಮಾರು 2:30ರ ವೇಳೆಗೆ ಮೂರು ಕಾರುಗಳಲ್ಲಿ ಬಂದಿದ್ದ ಮುಖವಾಡಧಾರಿ ದುಷ್ಕರ್ಮಿಗಳು ಚಿನ್ನಾಭರಣ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ, ಸುಮಾರು 180 ಗ್ರಾಂ ಚಿನ್ನಾಭರಣ, ನಗದು ಹಾಗೂ ಐಷಾರಾಮಿ ಕಾರನ್ನು ದೋಚಿ ಪರಾರಿಯಾಗಿದ್ದರು. ಈ ಘಟನೆ ಕರಾವಳಿಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು.

ಈಗ ಕಾರು ಬೆಂಜನಪದವಿನಲ್ಲಿ ಪತ್ತೆಯಾಗಿರುವುದರಿಂದ ಆರೋಪಿಗಳು ಇದೇ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಬೆಂಗಳೂರು, ಕೊಡಗು, ಧರ್ಮಸ್ಥಳ ಅಥವಾ ತಲಪಾಡಿ ಮಾರ್ಗವಾಗಿ ಕೇರಳಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ಟೋಲ್ ಗೇಟ್‌ಗಳು ಹಾಗೂ ಪ್ರಮುಖ ಜಂಕ್ಷನ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ.

ಪ್ರಕರಣದ ಭೇದಕ್ಕಾಗಿ ಮಂಗಳೂರು ನಗರ ಪೊಲೀಸರು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದು, ಆರೋಪಿಗಳ ಬಂಧನಕ್ಕಾಗಿ ವ್ಯಾಪಕ ಶೋಧ ಕಾರ್ಯ ಮುಂದುವರಿದಿದೆ.

Ads on article

Advertise in articles 1

advertising articles 2

Advertise under the article