-->
 ಅಜ್ಮೀರ್ ಯಾತ್ರೆ ಮುಗಿಸಿ ರೈಲಿನಲ್ಲಿ ವಾಪಸಾಗುತ್ತಿದ್ದ ವೇಳೆ ವೃದ್ಧ ನಾಪತ್ತೆ

ಅಜ್ಮೀರ್ ಯಾತ್ರೆ ಮುಗಿಸಿ ರೈಲಿನಲ್ಲಿ ವಾಪಸಾಗುತ್ತಿದ್ದ ವೇಳೆ ವೃದ್ಧ ನಾಪತ್ತೆ


ಅಜ್ಮೀರ್ ದರ್ಗಾ ದರ್ಶನ ಮುಗಿಸಿ ಕುಟುಂಬದೊಂದಿಗೆ ತವರಿಗೆ ಮರಳುತ್ತಿದ್ದ ವೇಳೆ 68 ವರ್ಷದ ವೃದ್ಧರೊಬ್ಬರು ರೈಲು ಪ್ರಯಾಣದ ಮಧ್ಯೆಯೇ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಕಾಸರಗೋಡು ಮೂಲದ ಮುಸಾ ಅಲಿಯಾಸ್ ಅಬುಸಾಲಿ (68) ಅವರು ಜೂನ್ 22ರಂದು ಕುಟುಂಬ ಸದಸ್ಯರೊಂದಿಗೆ ಕಾಸರಗೋಡಿನಿಂದ ಅಜ್ಮೀರ್‌ಗೆ ತೆರಳಿದ್ದರು. ಜೂನ್ 23ರಂದು ದರ್ಗಾದಲ್ಲಿ ದರ್ಶನ ಮುಗಿಸಿ, ಜೂನ್ 26ರಂದು ಅಜ್ಮೀರ್ ರೈಲು ನಿಲ್ದಾಣದಿಂದ ಮುರುಸಾದ್ ಎಕ್ಸ್‌ಪ್ರೆಸ್‌ನ ಎಸ್-4 ಬೋಗಿಯ ಕಾಯ್ದಿರಿಸಿದ ಆಸನದಲ್ಲಿ ಕಾಸರಗೋಡಿನತ್ತ ಪ್ರಯಾಣ ಆರಂಭಿಸಿದ್ದರು.

ಜೂನ್ 27ರಂದು ರಾತ್ರಿ ಕಾರವಾರ ಸಮೀಪ ಕುಟುಂಬದವರೊಂದಿಗೆ ಊಟ ಮಾಡಿ ಎಲ್ಲರೂ ವಿಶ್ರಾಂತಿಗೆ ಜಾರಿದ್ದರು. ಆದರೆ ಮುಂಜಾನೆ ಸುಮಾರು 1 ಗಂಟೆ ವೇಳೆಗೆ ರೈಲು ಮಂಗಳೂರು ಭಾಗ ತಲುಪಿದಾಗ ಮುಸಾ ಅವರು ತಮ್ಮ ಆಸನದಲ್ಲಿ ಕಾಣಿಸದಿರುವುದು ಕುಟುಂಬದವರ ಗಮನಕ್ಕೆ ಬಂದಿದೆ. ತಕ್ಷಣವೇ ಬೋಗಿಯ ಎಲ್ಲ ಭಾಗಗಳು ಹಾಗೂ ಶೌಚಾಲಯಗಳಲ್ಲಿ ಹುಡುಕಾಟ ನಡೆಸಿದರೂ ಅವರ ಸುಳಿವು ಪತ್ತೆಯಾಗಲಿಲ್ಲ.

ಮುಸಾ ಅಬುಸಾಲಿ ಅವರು ವಯೋವೃದ್ಧರಾಗಿದ್ದು, ನಡೆಯಲು ವಾಕಿಂಗ್ ಸ್ಟಿಕ್‌ನ ಸಹಾಯ ಪಡೆಯುತ್ತಿದ್ದರು. ರೈಲು ಮಧ್ಯದಲ್ಲಿ ಯಾವುದಾದರೂ ನಿಲ್ದಾಣದಲ್ಲಿ ನಿಂತ ವೇಳೆ ಅವರು ಇಳಿದು ದಿಕ್ಕುತಪ್ಪಿರುವ ಸಾಧ್ಯತೆ ಇದೆ ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ಬೈಂದೂರು ರೈಲ್ವೆ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ವೃದ್ಧರ ಪತ್ತೆಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಮುಸಾ ಅಬುಸಾಲಿ ಅವರ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ರೈಲ್ವೆ ಪೊಲೀಸರಿಗೆ ತಕ್ಷಣ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

Ads on article

Advertise in articles 1

advertising articles 2

Advertise under the article