ಉದ್ಯಮಿಯ ಕಾರು ಅಡ್ಡಗಟ್ಟಿ ದರೋಡೆ: ಪತ್ನಿ-ಮಗನ ಅಪಹರಣಕ್ಕೆ ಯತ್ನ
ರಾಷ್ಟ್ರೀಯ ಹೆದ್ದಾರಿ–66ರ ಬೈಕಂಪಾಡಿ ಸಮೀಪ ಸೋಮವಾರ (ಜೂನ್ 29) ಮುಂಜಾನೆ ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಅವರ ಪತ್ನಿ ಹಾಗೂ ಮಗನನ್ನು ಅಪಹರಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಕೇರಳದ ಪಯ್ಯನ್ನೂರು ನಿವಾಸಿ ಉದ್ಯಮಿ ವಿಕಾಸ್ ಅವರು ಪತ್ನಿ ಹಾಗೂ ಮಗನೊಂದಿಗೆ ಮುಂಬೈನಲ್ಲಿ ನಡೆದ ಸ್ನೇಹಿತನ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಸ್ವಗ್ರಾಮಕ್ಕೆ ಕಾರಿನಲ್ಲಿ ಹಿಂದಿರುಗುತ್ತಿದ್ದರು. ಸೋಮವಾರ ಮುಂಜಾನೆ ಸುಮಾರು 2.30ರ ವೇಳೆಗೆ ಬೈಕಂಪಾಡಿಯ ದ್ವಾರ ಹೋಟೆಲ್ ಸಮೀಪ ತಲುಪುತ್ತಿದ್ದಂತೆ, ಮೂರು ಕಾರುಗಳಲ್ಲಿ ಬಂದ ಸುಮಾರು 7ರಿಂದ 8 ಮಂದಿ ದುಷ್ಕರ್ಮಿಗಳು ಅವರ ಕಾರನ್ನು ರಸ್ತೆ ಮಧ್ಯೆಯೇ ಅಡ್ಡಗಟ್ಟಿ ಬಲವಂತವಾಗಿ ನಿಲ್ಲಿಸಿದ್ದಾರೆ.
ಬಳಿಕ ಉದ್ಯಮಿ ವಿಕಾಸ್ ಅವರನ್ನು ಕಾರಿನಿಂದ ಕೆಳಗಿಳಿಸಿದ ದುಷ್ಕರ್ಮಿಗಳು, ಅವರ ಪತ್ನಿ ಮತ್ತು ಮಗನನ್ನು ಅದೇ ಕಾರಿನಲ್ಲೇ ಅಪಹರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಪಣಂಬೂರು ಬೀಚ್ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ದುಷ್ಕರ್ಮಿಗಳು ತಾಯಿ-ಮಗನನ್ನು ಬೆದರಿಸಿ, ಅವರ ಬಳಿಯಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ನಂತರ ಅವರನ್ನು ರಸ್ತೆಯಲ್ಲೇ ಬಿಟ್ಟು, ಉದ್ಯಮಿಯ ಕಾರಿನೊಂದಿಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಿಂದ ಆಘಾತಕ್ಕೊಳಗಾದ ಉದ್ಯಮಿ ವಿಕಾಸ್ ಅವರು ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಣಂಬೂರು ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ದರೋಡೆಕೋರರ ಶೀಘ್ರ ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ.