ಉಡುಪಿ ಕುವರಿ ಸುಹಾನಿಗೆ “ಮಿಸ್ಸಿ ಕರ್ನಾಟಕ 2026” ಕಿರೀಟ
Tuesday, June 23, 2026
ಸಿಜ್ಲಿಂಗ್ ಗೈಸ್ ಫ್ಯಾಷನ್ ಮ್ಯಾನೇಜ್‌ಮೆಂಟ್ ಮತ್ತು ಹೆವೆನ್ ರೋಸ್ ಜಂಟಿಯಾಗಿ ಆಯೋಜಿಸಿದ 'ಮಿಸ್ಸಿ, ಟೀನ್, ಮಿಸ್ಟರ್ ಮತ್ತು ಮಿಸ್ ಕರ್ನಾಟಕ' ಸೌಂದರ್ಯ ಸ್ಪರ್ಧೆಯಲ್ಲಿ ಉಡುಪಿಯ ಸುಹಾನಿ ಕುಕ್ಕಿಕಟ್ಟೆ ಅವರು "ಮಿಸ್ಸಿ ಕರ್ನಾಟಕ 2026" ಕಿರೀಟವನ್ನು ಮುಡಿಗೇರಿಸಿಕೊಂಡರು.
ಮಂಗಳೂರಿನ ಪಾಂಡೇಶ್ವರದಲ್ಲಿರುವ ಫಿಜಾ ಬೈ ನೆಕ್ಸಸ್ ಮಾಲ್ ನಲ್ಲಿ 5 ರಿಂದ 12 ವರ್ಷದ ಒಳಗಿನ ವಿಭಾಗದಲ್ಲಿ ನಡೆದ ಈ ಸೌಂದರ್ಯ ಸ್ಪರ್ಧೆಯಲ್ಲಿ, ಬೆಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ ಮತ್ತು ಉಡುಪಿ ಭಾಗಗಳಿಂದ ಒಟ್ಟು 14 ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯು ಟ್ಯಾಲೆಂಟ್ ರೌಂಡ್, ಪ್ರಶ್ನೋತ್ತರ ಸುತ್ತು ಸೇರಿದಂತೆ ಸುಮಾರು ನಾಲ್ಕು ಹಂತಗಳಲ್ಲಿ ನಡೆಯಿತು.
ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸುಹಾನಿ, ಅಂತಿಮವಾಗಿ ಕಿರೀಟವನ್ನು ತನ್ನದಾಗಿಸಿಕೊಂಡರು. ಈಕೆ ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ.
ಸುಹಾನಿ ಅವರು ಮಾಡೆಲ್ ಸ್ಪೂರ್ತಿ ಶೆಟ್ಟಿ ಅವರಿಂದ ತರಬೇತಿ ಪಡೆದಿದ್ದು, ಉಡುಪಿಯ ಎಕ್ಸ್ಟ್ರೀಮ್ ಡಾನ್ಸ್ ಅಕಾಡೆಮಿಯ ಮಂಜಿತ್ ಶೆಟ್ಟಿ ಅವರ ಶಿಷ್ಯೆಯಾಗಿದ್ದಾರೆ.
ಸುಹಾನಿ ಕುಕ್ಕಿಕಟ್ಟೆ ಅವರು ಕುಕ್ಕಿಕಟ್ಟೆ ನಿವಾಸಿಗಳಾದ ಗೋಪಿಚಂದ್ ಮತ್ತು ಅನಿತಾ ದಂಪತಿಯ ಪುತ್ರಿ. ಅವರ ಈ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
