ಮಡಿಕೇರಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ತೀವ್ರ ತಪಾಸಣೆ
ಮಡಿಕೇರಿ ಜಿಲ್ಲಾ ಪ್ರಧಾನ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಜೂನ್ 23ರ ಬೆಳಿಗ್ಗೆ ಸುಮಾರು 8.10 ಗಂಟೆಗೆ ‘ಸಹನಾ ಟಿ.’ ಎಂಬ ಹೆಸರಿನ ಇ-ಮೇಲ್ ಐಡಿಯಿಂದ ನ್ಯಾಯಾಲಯದ ಅಧಿಕೃತ ಇ-ಮೇಲ್ ವಿಳಾಸಕ್ಕೆ ಬೆದರಿಕೆ ಸಂದೇಶ ರವಾನೆಯಾಗಿದೆ.
ಇ-ಮೇಲ್‌ನಲ್ಲಿ ಮಧ್ಯಾಹ್ನ 2 ಗಂಟೆಯ ವೇಳೆಗೆ ಸೈನೈಡ್ ಬಾಂಬ್ ಬಳಸಿ ನ್ಯಾಯಾಲಯ ಕಟ್ಟಡವನ್ನು ಸ್ಫೋಟಿಸಲಾಗುವುದು ಹಾಗೂ ಐಸಿಸ್ ಉಗ್ರ ಸಂಘಟನೆಯ ಆತ್ಮಹತ್ಯಾ ಬಾಂಬರ್‌ಗಳು ದಾಳಿ ನಡೆಸಲಿದ್ದಾರೆ ಎಂದು ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಿಬ್ಬಂದಿ ನ್ಯಾಯಾಲಯ ಸಂಕೀರ್ಣದಲ್ಲಿ ತುರ್ತು ತಪಾಸಣೆ ಕೈಗೊಂಡಿದ್ದಾರೆ. ನ್ಯಾಯಾಲಯದ ಮೂರು ಮಹಡಿಗಳಲ್ಲೂ ಸುದೀರ್ಘ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಪರಿಶೀಲನೆ ಮುಂದುವರಿದಿದೆ.
ಭದ್ರತಾ ದೃಷ್ಟಿಯಿಂದ ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೂ ನ್ಯಾಯಾಲಯ ಸಂಕೀರ್ಣಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ನ್ಯಾಯಾಲಯದ ಸಿಬ್ಬಂದಿ, ವಕೀಲರು ಹಾಗೂ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಬೆದರಿಕೆ ಇ-ಮೇಲ್‌ನ ಮೂಲವನ್ನು ಪತ್ತೆಹಚ್ಚುವ ಕಾರ್ಯವೂ ಆರಂಭವಾಗಿದ್ದು, ಸೈಬರ್ ತಜ್ಞರ ನೆರವಿನಿಂದ ತನಿಖೆ ನಡೆಸಲಾಗುತ್ತಿದೆ. ತಪಾಸಣೆ ಹಾಗೂ ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.