ಎಸ್‌ಎಸ್‌ಎಲ್‌ಸಿ ಖಾಸಗಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸಿಗದೆ ಪರದಾಟ
2027ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಖಾಸಗಿಯಾಗಿ ಬರೆಯಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅಗತ್ಯ ಪಠ್ಯಪುಸ್ತಕಗಳು ಲಭ್ಯವಾಗದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಉಡುಪಿ ಸ್ನೇಹ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಉಮೇಶ್ ಎ. ನಾಯ್ಕ್ ಚೇರ್ಕಾಡಿ ತಿಳಿಸಿದ್ದಾರೆ.
ಒಂದು ಕಾಲದಲ್ಲಿ ಒಂದನೇ ತರಗತಿಯಿಂದ ಪದವಿ ಮಟ್ಟದವರೆಗೆ ಎಲ್ಲಾ ಪಠ್ಯಪುಸ್ತಕಗಳು ಸಾರ್ವಜನಿಕ ಪುಸ್ತಕ ಮಳಿಗೆಗಳು ಹಾಗೂ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುತ್ತಿದ್ದವು. ಇದರಿಂದ ಶಿಕ್ಷಣ ಪಡೆಯಲು ಬಯಸುವ ಯಾವುದೇ ವಿದ್ಯಾರ್ಥಿಗೆ ಪಠ್ಯಪುಸ್ತಕಗಳ ಕೊರತೆಯ ಸಮಸ್ಯೆ ಎದುರಾಗುತ್ತಿರಲಿಲ್ಲ. ಆದರೆ ನಂತರ ಕರ್ನಾಟಕ ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳ ವಿತರಣಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲೆಗಳ ಬೇಡಿಕೆಯನ್ನು ಆಧರಿಸಿ ಪುಸ್ತಕಗಳನ್ನು ಪೂರೈಸುವ ಕ್ರಮವನ್ನು ಜಾರಿಗೊಳಿಸಿತು. ಈ ವ್ಯವಸ್ಥೆಯಲ್ಲಿ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಹಾಗೂ ಖಾಸಗಿ ಶಾಲೆಗಳಿಗೆ ಮಾರಾಟದ ಮೂಲಕ ಪುಸ್ತಕಗಳನ್ನು ವಿತರಿಸಲಾಗುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಪ್ರತಿ ವರ್ಷ ಉದ್ಯೋಗದಲ್ಲಿರುವವರು, ಶಾಲೆಯಿಂದ ದೂರ ಉಳಿದವರು ಹಾಗೂ ಅನುತ್ತೀರ್ಣಗೊಂಡು ಪುನಃ ಶಾಲೆಗೆ ಪ್ರವೇಶ ಪಡೆಯದ ಅನೇಕ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಖಾಸಗಿಯಾಗಿ ಬರೆಯುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಖಾಸಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಟ್ಯುಟೋರಿಯಲ್ ಕಾಲೇಜುಗಳಿಗೆ ವಿಶೇಷ ಇಂಡೆಂಟ್ ಮೂಲಕ ಪುಸ್ತಕಗಳನ್ನು ಪೂರೈಸಲಾಗುತ್ತಿತ್ತು.
ಆದರೆ ಈ ಬಾರಿ ವಿಶೇಷ ಇಂಡೆಂಟ್ ವ್ಯವಸ್ಥೆಗೆ ಶಿಕ್ಷಣ ಇಲಾಖೆ ಅವಕಾಶ ನೀಡದೇ ಇರುವುದರಿಂದ, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅವರ ಅಧ್ಯಯನ ಹಾಗೂ ಪರೀಕ್ಷಾ ಸಿದ್ಧತೆಗೆ ತೊಂದರೆಯಾಗುತ್ತಿದೆ ಎಂದು ಉಮೇಶ್ ಎ. ನಾಯ್ಕ್ ತಿಳಿಸಿದ್ದಾರೆ.
ಪರೀಕ್ಷೆ ಬರೆಯುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಪೂರ್ವ ತಯಾರಿಗಾಗಿ ಅಗತ್ಯವಾದ ಅಧ್ಯಯನ ಸಾಮಗ್ರಿಗಳನ್ನು ಒದಗಿಸುವುದು ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯಾಗಿದೆ. ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳೂ ಶಿಕ್ಷಣದ ಮುಖ್ಯವಾಹಿನಿಯ ಭಾಗವಾಗಿದ್ದು, ಅವರಿಗೆ ಪಠ್ಯಪುಸ್ತಕಗಳು ಸುಲಭವಾಗಿ ದೊರೆಯುವಂತೆ ಶಿಕ್ಷಣ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಖಾಸಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪಠ್ಯಪುಸ್ತಕಗಳ ಲಭ್ಯತೆ ಖಚಿತಪಡಿಸುವ ಕುರಿತು ಶಿಕ್ಷಣ ಇಲಾಖೆ ಗಂಭೀರವಾಗಿ ಚಿಂತನೆ ನಡೆಸಿ, ಶೀಘ್ರದಲ್ಲೇ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.