ಬ್ರಹ್ಮಾವರದಲ್ಲಿ ಹೊಸ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಸ್ಥಾಪನೆಗೆ ಸರಕಾರದ ಆದೇಶ
ಬ್ರಹ್ಮಾವರದಲ್ಲಿ ಹೊಸ ಮತ್ತು ಪೂರ್ಣ ಪ್ರಮಾಣದ ಸಿವಿಲ್ ನ್ಯಾಯಾಧೀಶರ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಸ್ಥಾಪನೆಗೆ ಕರ್ನಾಟಕ ಸರ್ಕಾರ ಆದೇಶಿಸಿದೆ.
ದಿನಾಂಕ 18.06.2026 ರ ಜಿಒ (Government Order) ಮೂಲಕ ಹೊರಡಿಸಲಾಗಿದೆ ಸರಕಾರದ ಆದೇಶವನ್ನು ಸ್ವಾಗತಿಸಿರುವ ಉಡುಪಿ ಬಾರ್ ಎಸೋಸಿಯೇಶನ್ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಇದರಿಂದ ಪ್ರಸ್ತುತ ವಾರಕ್ಕೆ 4 ದಿನ ಬ್ರಹ್ಮಾವರಕ್ಕೆ ಸಂಚಾರಿ ನ್ಯಾಯಾಲಯವಾಗಿ ಕಾರ್ಯನಿರ್ವಹಿಸುತ್ತಿರುವ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವನ್ನು ಉಡುಪಿಯಲ್ಲಿಯೇ ಶಾಶ್ವತವಾಗಿ ಉಳಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ, ಉಡುಪಿಯ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ವಾರಕ್ಕೆ 4 ದಿನ ಬ್ರಹ್ಮಾವರಕ್ಕೆ ಸಂಚಾರಿ ನ್ಯಾಯಾಲಯವಾಗಿ ಕಾರ್ಯನಿರ್ವಹಿಸುತ್ತಿದೆ. ವಕೀಲರ ಸಂಘದ ಬಲವಾದ ಆಕ್ಷೇಪಣೆಗಳ ಹೊರತಾಗಿಯೂ, ಕರ್ನಾಟಕದ ಮಾನ್ಯ ಉಚ್ಚ ನ್ಯಾಯಾಲಯವು ಪತ್ರವೊಂದರ ಮೂಲಕ ಉಡುಪಿಯ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವನ್ನು ಬ್ರಹ್ಮಾವರಕ್ಕೆ ಶಾಶ್ವತವಾಗಿ ಸ್ಥಳಾಂತರಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
“ಉಡುಪಿಯ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು 65 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟಿದ್ದು, 1961 ರಿಂದ ಕಾರ್ಯಾಚರಿಸುತ್ತಿತ್ತು. ಅಂದಿನಿಂದ, ಜನರಿಗೆ ನ್ಯಾಯ ನೀಡುವ ವಿಷಯದಲ್ಲಿ ಸಾಕಷ್ಟು ಕೆಲಸದ ಹೊರೆಯೊಂದಿಗೆ, ಉಡುಪಿ ಜಿಲ್ಲಾ ನ್ಯಾಯಾಂಗದ ಅವಿಭಾಜ್ಯ ಅಂಗವಾಗಿ ಈ ನ್ಯಾಯಾಲಯ ಕಾರ್ಯಾಚರಿಸುತ್ತಿತ್ತು.
ಈ ನಿಟ್ಟಿನಲ್ಲಿ, ಉಡುಪಿ ವಕೀಲರ ಸಂಘದ ಅಧ್ಯಕ್ಷನಾಗಿ, ನಾನು ಉಡುಪಿಯ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವನ್ನು ಬ್ರಹ್ಮಾವರಕ್ಕೆ ಸ್ಥಳಾಂತರಿಸುವ ಪ್ರಸ್ತಾವನೆಯನ್ನು ಕೈಬಿಟ್ಟು, ಬ್ರಹ್ಮಾವರದಲ್ಲಿ ಪ್ರತ್ಯೇಕ ಮತ್ತು ಹೊಸ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವನ್ನು ಸ್ಥಾಪಿಸುವಂತೆ ಪ್ರಾರ್ಥಿಸಿ, ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆ. ಇದು ವಿಲೇವಾರಿಗೆ ಬಾಕಿ ಇರುವಾಗಲೇ, ರಿಟ್ ಅರ್ಜಿ ಸಲ್ಲಿಕೆಯ ಫಲಶ್ರುತಿ ಎಂಬಂತೆ ಸರಕಾರವು ಬ್ರಹ್ಮಾವರದಲ್ಲಿ ಹೊಸ ನ್ಯಾಯಾಲಯ ಸ್ಥಾಪನೆಗೆ ಆದೇಶಿಸಿದ್ದು, ಉಡುಪಿಯಿಂದ ಬ್ರಹ್ಮಾವರಕ್ಕೆ ನ್ಯಾಯಾಲಯ ಸ್ಥಳಾಂತರ ಪ್ರಕ್ರಿಯೆಯು ಸ್ಥಗಿತಗೊಂಡಂತಾಗಿದೆ.
ಮಂಗಳೂರಿನ ವಿಧಾನ ಪರಿಷತ್ ಸದಸ್ಯ ಶ್ರೀ ಇವಾನ್ ಡಿಸೋಜ ಅವರ ನಿರಂತರ ಪ್ರಯತ್ನ ಮತ್ತು ಸಕಾಲಿಕ ಬೆಂಬಲದಿಂದಾಗಿ, ಕರ್ನಾಟಕ ಸರ್ಕಾರವು ಬ್ರಹ್ಮಾವರದಲ್ಲಿ ಹೊಸ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಸ್ಥಾಪನೆಗೆ ಮಂಜೂರು ನೀಡಿದೆ” ಎಂದು ರೆನೋಲ್ಡ್ ವಿವರಿಸಿದ್ದಾರೆ.