ಬೀದಿನಾಯಿಗೆ ಉಡುಪಿ ನಗರಸಭೆ ವಾಹನ ಡಿಕ್ಕಿ: ₹30 ಸಾವಿರ ಪರಿಹಾರಕ್ಕೆ ಕಾನೂನು ನೋಟಿಸ್
ಉಡುಪಿ ನಗರದ ಕುಂಜಿಬೆಟ್ಟು ಪ್ರದೇಶದಲ್ಲಿ ಉಡುಪಿ ನಗರಸಭೆಗೆ ಸೇರಿದ ವಾಹನವೊಂದು ಬೀದಿ ನಾಯಿಗೆ ಡಿಕ್ಕಿ ಹೊಡೆದು, ಗಾಯಗೊಂಡ ಪ್ರಾಣಿಗೆ ನೆರವು ನೀಡದೆ ಸ್ಥಳದಿಂದ ತೆರಳಿದ ಆರೋಪದ ಹಿನ್ನೆಲೆಯಲ್ಲಿ ನಗರಸಭೆಗೆ ಕಾನೂನು ನೋಟಿಸ್ ಜಾರಿಗೊಳಿಸಲಾಗಿದೆ.
ಪ್ರಾಣಿಹಕ್ಕುಗಳ ಹೋರಾಟಗಾರ್ತಿ ಹಾಗೂ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್‌ನ ವಕೀಲೆ ಬಬಿತಾ ರಾಜ್ ಅವರು ಉಡುಪಿ ನಗರಸಭೆ ಆಯುಕ್ತರಿಗೆ ನೋಟಿಸ್ ಸಲ್ಲಿಸಿದ್ದಾರೆ. ಜೂನ್ 16ರಂದು ಬೆಳಿಗ್ಗೆ 7.45ರಿಂದ 8 ಗಂಟೆಯ ನಡುವೆ ನಗರಸಭೆಯ ಅಧಿಕೃತ ವಾಹನವು ಬೀದಿ ನಾಯಿಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಿದ್ದಾರೆ. ಅಪಘಾತದ ಬಳಿಕ ವಾಹನ ಚಾಲಕ ಗಾಯಗೊಂಡ ನಾಯಿಗೆ ಯಾವುದೇ ನೆರವು ನೀಡದೆ ಸ್ಥಳದಿಂದ ತೆರಳಿದ್ದಾನೆ ಎಂದು ದೂರಲಾಗಿದೆ.
ಡಿಕ್ಕಿಯ ಪರಿಣಾಮ ನಾಯಿ ರಸ್ತೆಯಲ್ಲೇ ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದು, ಸಾರ್ವಜನಿಕರಿಂದ ಮಾಹಿತಿ ದೊರಕಿದ ಬಳಿಕ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ತುರ್ತು ಚಿಕಿತ್ಸೆಗೆ ದಾಖಲಿಸಿತು. ಮೊದಲಿಗೆ ಪಶುವೈದ್ಯ ಡಾ. ಪ್ರಶಾಂತ್ ಅವರ ಬಳಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಎಕ್ಸ್-ರೇ ಪರೀಕ್ಷೆಗಾಗಿ ಸಮನ್ವಯ ಕೇಂದ್ರಕ್ಕೆ ಹಾಗೂ ಶಸ್ತ್ರಚಿಕಿತ್ಸೆಗಾಗಿ ಡಾ. ವಾಸುದೇವ ಪೈ ಅವರ ಬಳಿ ಕರೆದೊಯ್ಯಲಾಗಿದೆ.
ವೈದ್ಯಕೀಯ ಪರೀಕ್ಷೆಯಲ್ಲಿ ನಾಯಿಗೆ ನಾಲ್ಕು ಕಡೆ ಮೂಳೆ ಮುರಿತ ಉಂಟಾಗಿರುವುದು ಪತ್ತೆಯಾಗಿದ್ದು, ಬಾಲದ ಮೂಳೆ ಗಂಭೀರವಾಗಿ ಹಾನಿಗೊಳಗಾದ ಕಾರಣ ಬಾಲವನ್ನು ಕತ್ತರಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಲಾಗಿದೆ. ಅತಿಯಾದ ರಕ್ತಸ್ರಾವದಿಂದಾಗಿ ನಾಯಿಗೆ ರಕ್ತ ವರ್ಗಾವಣೆ (ಬ್ಲಡ್ ಟ್ರಾನ್ಸ್‌ಫ್ಯೂಷನ್) ಕೂಡ ಮಾಡಲಾಗಿದೆ.
ಈ ಘಟನೆ ಮೋಟಾರು ವಾಹನ ಕಾಯ್ದೆ 1988 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ಉಲ್ಲಂಘನೆಯಾಗಿದ್ದು, ಗಾಯಗೊಂಡ ಪ್ರಾಣಿಗೆ ನೆರವು ನೀಡದೇ ಸ್ಥಳದಿಂದ ತೆರಳಿರುವುದು ಗಂಭೀರ ಅಪರಾಧ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಬೀದಿ ನಾಯಿಗಳ ರಕ್ಷಣೆ ಮತ್ತು ನಿರ್ವಹಣೆ ನಗರಸಭೆಯ ಕಾನೂನುಬದ್ಧ ಜವಾಬ್ದಾರಿಯಾಗಿದ್ದು, ನಗರಸಭೆಯ ವಾಹನವೇ ಇಂತಹ ಘಟನೆಗೆ ಕಾರಣವಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಬಬಿತಾ ರಾಜ್ ತಿಳಿಸಿದ್ದಾರೆ.
ಗಾಯಗೊಂಡ ನಾಯಿಯ ಚಿಕಿತ್ಸೆಗೆ, ಶಸ್ತ್ರಚಿಕಿತ್ಸೆ, ಔಷಧೋಪಚಾರ, ರಕ್ತ ವರ್ಗಾವಣೆ, ಪುನರ್ವಸತಿ ಹಾಗೂ ಎರಡು ರಿಂದ ಮೂರು ತಿಂಗಳ ಫೋಸ್ಟರ್ ಕೇರ್ ಸೇರಿದಂತೆ ಸುಮಾರು 30 ಸಾವಿರ ರೂ. ವೆಚ್ಚವಾಗಲಿದ್ದು, ಈ ಮೊತ್ತವನ್ನು ನಗರಸಭೆಯೇ ಭರಿಸಬೇಕು ಎಂದು ನೋಟಿಸ್‌ನಲ್ಲಿ ಆಗ್ರಹಿಸಲಾಗಿದೆ.
ಇದೇ ವೇಳೆ ಸಂಬಂಧಿತ ವಾಹನ ಹಾಗೂ ಚಾಲಕನನ್ನು ತಕ್ಷಣ ಗುರುತಿಸಿ ಕ್ರಮ ಕೈಗೊಳ್ಳಬೇಕು, ತಪ್ಪಿತಸ್ಥರ ವಿರುದ್ಧ ಶಿಸ್ತು ಮತ್ತು ಕಾನೂನು ಕ್ರಮ ಜರುಗಿಸಬೇಕು ಹಾಗೂ ಏಳು ದಿನಗಳೊಳಗೆ 30 ಸಾವಿರ ರೂ. ಪರಿಹಾರ ಬಿಡುಗಡೆ ಮಾಡಬೇಕು ಎಂದು ನೋಟಿಸ್‌ನಲ್ಲಿ ಒತ್ತಾಯಿಸಲಾಗಿದೆ. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಜಿಲ್ಲಾಧಿಕಾರಿ, ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ನ್ಯಾಯಾಲಯದ ಮೊರೆ ಹೋಗುವುದಾಗಿ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ ಎಚ್ಚರಿಕೆ ನೀಡಿದೆ.