-->
ಆಗುಂಬೆ ಘಾಟ್‌ನಲ್ಲಿ ಜೂ.15ರಿಂದ ವಾಹನ ಸಂಚಾರ ನಿಷೇಧ: ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ

ಆಗುಂಬೆ ಘಾಟ್‌ನಲ್ಲಿ ಜೂ.15ರಿಂದ ವಾಹನ ಸಂಚಾರ ನಿಷೇಧ: ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ


ರಾಷ್ಟ್ರೀಯ ಹೆದ್ದಾರಿ-169ಎಯ ತೀರ್ಥಹಳ್ಳಿ ಆಗುಂಬೆ ಘಾಟ್‌ನಲ್ಲಿ ಜೂನ್ 15ರಿಂದ ಮಳೆಗಾಲ ಮುಗಿಯುವವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಿ ಶಿವಮೊಗ್ಗ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಈ ಕುರಿತು ಆದೇಶ ಹೊರಡಿಸಿದ್ದು, ಆಗುಂಬೆ ಘಾಟ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ವಾಹನಗಳ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಶಿವಮೊಗ್ಗದಿಂದ ಹೊಸನಗರ–ಮಾಸ್ತಿಕಟ್ಟೆ ಮಾರ್ಗವಾಗಿ ಕುಂದಾಪುರ ಹಾಗೂ ಉಡುಪಿಗೆ ಸಂಪರ್ಕ ಕಲ್ಪಿಸುವ ಹುಲಿಕಲ್ ಘಾಟ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ ಬಳಿಕ ನಡೆಯುತ್ತಿರುವ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರ ಪರಿಣಾಮವಾಗಿ ಹೆಚ್ಚಿನ ಭಾರಿ ವಾಹನಗಳು ಆಗುಂಬೆ ಘಾಟ್ ಮಾರ್ಗವನ್ನು ಬಳಸುತ್ತಿದ್ದು, ನಿರಂತರ ಮಳೆಯಿಂದ ಘಾಟ್ ರಸ್ತೆಯ ಬದಿಗಳಲ್ಲಿ ಭೂಕುಸಿತ ಸಂಭವಿಸುವ, ಅಪಘಾತಗಳು ನಡೆಯುವ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಅಲ್ಲದೆ, ಆರೋಗ್ಯ ಹಾಗೂ ತುರ್ತು ಸೇವೆಗಳಿಗಾಗಿ ಮಣಿಪಾಲ್, ಉಡುಪಿ ಮತ್ತು ಮಂಗಳೂರು ನಗರಗಳಿಗೆ ತೆರಳುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ಜನರಿಗೆ ಈ ಮಾರ್ಗ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ರಸ್ತೆ ಸಂಚಾರಕ್ಕೆ ತೊಂದರೆ ಉಂಟಾದರೆ ಸಾರ್ವಜನಿಕರಿಗೆ ಹೆಚ್ಚಿನ ಸಮಸ್ಯೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಪರ್ಯಾಯ ಮಾರ್ಗಗಳು:

ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ ತೆರಳುವ ಭಾರಿ ವಾಹನಗಳು:

ತೀರ್ಥಹಳ್ಳಿ – ನಗರ – ನಾಗೋಡಿ – ಕೊಲ್ಲೂರು – ಕುಂದಾಪುರ – ಉಡುಪಿ

ತೀರ್ಥಹಳ್ಳಿ – ಶೃಂಗೇರಿ – ಕೆರೆಕಟ್ಟೆ – ಬಜಗೋಳಿ – ಕಾರ್ಕಳ – ಉಡುಪಿ

ಉಡುಪಿಯಿಂದ ತೀರ್ಥಹಳ್ಳಿ ಕಡೆಗೆ ತೆರಳುವ ಭಾರಿ ವಾಹನಗಳು:

ಉಡುಪಿ – ಕುಂದಾಪುರ – ಕೊಲ್ಲೂರು – ನಾಗೋಡಿ – ನಗರ – ತೀರ್ಥಹಳ್ಳಿ

ಉಡುಪಿ – ಕಾರ್ಕಳ – ಬಜಗೋಳಿ – ಕೆರೆಕಟ್ಟೆ – ಶೃಂಗೇರಿ – ತೀರ್ಥಹಳ್ಳಿ

ಮಳೆಗಾಲದ ಅವಧಿಯಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಘಾಟ್ ರಸ್ತೆಯ ಸಂರಕ್ಷಣೆಯ ದೃಷ್ಟಿಯಿಂದ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Ads on article

Advertise in articles 1

advertising articles 2

Advertise under the article