ಕರಾವಳಿಯ ಹಿಂದೂಸ್ತಾನಿ ಗಾಯಕಿ ಮಹಾಲಕ್ಷ್ಮಿ ಶೆಣೈಗೆ ರಾಷ್ಟ್ರಮಟ್ಟದ ಗೌರವ
ಕರಾವಳಿ ಕರ್ನಾಟಕದ ಕಾರ್ಕಳದ ಪ್ರತಿಭಾವಂತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ ವಿದುಷಿ ಮಹಾಲಕ್ಷ್ಮಿ ಶೆಣೈ ಅವರು ರಾಷ್ಟ್ರ ಮಟ್ಟದಲ್ಲಿ ಗೌರವ ಪಡೆದಿದ್ದಾರೆ. 2024ನೇ ಸಾಲಿನ ಪ್ರತಿಷ್ಠಿತ ‘ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ’ಕ್ಕೆ ಅವರು ಆಯ್ಕೆಯಾಗಿದ್ದು, ಸಂಗೀತ ಲೋಕದಲ್ಲಿ ಕರ್ನಾಟಕದ ಹೆಮ್ಮೆ ಹೆಚ್ಚಿಸಿದ್ದಾರೆ.
ಕರಾವಳಿ ಕರ್ನಾಟಕದ ಕಾರ್ಕಳ ಮೂಲದ ವಿದುಷಿ ಮಹಾಲಕ್ಷ್ಮಿ ಶೆಣೈ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತು ಮೂಡಿಸಿದ್ದಾರೆ. ಬಾಲ್ಯದಿಂದಲೇ ಸಂಗೀತದತ್ತ ಆಸಕ್ತಿ ಹೊಂದಿದ್ದ ಅವರು, ಇಂದು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಯುವ ಪ್ರತಿಭೆ.
ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಹಿಂದೂಸ್ತಾನಿ ಸಂಗೀತ ವಿದ್ವಾಂಸ ಪಂಡಿತ್ ವಿಶ್ವಮೋಹನ್ ಭಟ್ ಗುರುಗಳ ಶಿಷ್ಯೆಯಾಗಿರುವ ಮಹಾಲಕ್ಷ್ಮಿ ಶೆಣೈ ಅವರು, ವಿವಿಧ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಸಂಗೀತ ವೇದಿಕೆಗಳಲ್ಲಿ ತಮ್ಮ ಗಾಯನದ ಮೂಲಕ ಮೆಚ್ಚುಗೆ ಪಡೆದಿದ್ದಾರೆ. ಶಾಸ್ತ್ರೀಯ ರಾಗಗಳ ಸೂಕ್ಷ್ಮತೆ, ಭಾವಪೂರ್ಣ ಗಾಯನ ಮತ್ತು ಶುದ್ಧ ಶೈಲಿಯ ಕಾರಣದಿಂದ ಅವರು ಶ್ರೋತೃಗಳ ಮನ ಗೆದ್ದಿದ್ದಾರೆ.
ಕರ್ನಾಟಕ ಶಾಸ್ತ್ರೀಯ ಸಂಗೀತದಿಂದ ತಮ್ಮ ಪ್ರಯಾಣ ಆರಂಭಿಸಿದ ಇವರು, 11ನೇ ವಯಸ್ಸಿನಲ್ಲಿ ಹಿಂದೂಸ್ತಾನಿ ಸಂಗೀತದೆಡೆಗೆ ಆಕರ್ಷಿತರಾದರು. 1999 ರಲ್ಲಿ ತಮ್ಮ ಸಂಗೀತ ಪಯಣವನ್ನು ಆರಂಭಿಸಿದ ಇವರು, ಸಾವಿರಾರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.ಕರ್ನಾಟಕದ ಯುವ ಪ್ರತಿಭೆ ಕಾರ್ಕಳದ ಡಾ. ಪ್ರಕಾಶ್ ಶೆಣೈ ಹಾಗೂ ಭಾರತಿ ದಂಪತಿಯ ಪುತ್ರಿ. ಮಾಜಿ ಸಂಸದ ಪಿ. ರಂಗನಾಥ ಶೆಣೈ ಇವರ ಮೊಮ್ಮಗಳು.
‘ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ’ವನ್ನು ಸಂಗೀತ ನಾಟಕ ಅಕಾಡೆಮಿ ಪ್ರತಿ ವರ್ಷ 40 ವರ್ಷದೊಳಗಿನ ಪ್ರತಿಭಾವಂತ ಕಲಾವಿದರಿಗೆ ನೀಡುತ್ತದೆ. ಸಂಗೀತ, ನೃತ್ಯ, ನಾಟಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಯುವ ಕಲಾವಿದರನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವುದು ಈ ಪ್ರಶಸ್ತಿಯ ಉದ್ದೇಶವಾಗಿದೆ. ಕರಾವಳಿಯ ಪ್ರತಿಭೆ ವಿದುಷಿ ಮಹಾಲಕ್ಷ್ಮಿ ಶೆಣೈ ಅವರು ಪ್ರತಿಷ್ಠಿತ ‘ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ’ಕ್ಕೆ ಭಾಜನರಾಗಿರುವುದು, ಶಾಸ್ತ್ರೀಯ ಸಂಗೀತ ಪರಂಪರೆಗೆ ಮತ್ತೊಂದು ಗೌರವವನ್ನು ಸೇರಿಸಿದಂತಾಗಿದೆ.
.jpeg)
