-->
ಅಕ್ರಮ ಅನಿಲ ಸಿಲಿಂಡರ್ ದಾಸ್ತಾನು ಮತ್ತು ಮಾರಾಟ: ಆರೋಪಿಯ ಬಂಧನ

ಅಕ್ರಮ ಅನಿಲ ಸಿಲಿಂಡರ್ ದಾಸ್ತಾನು ಮತ್ತು ಮಾರಾಟ: ಆರೋಪಿಯ ಬಂಧನ


ಅಕ್ರಮವಾಗಿ ಅನಿಲ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದು, ದೊಡ್ಡ ಪ್ರಮಾಣದ ವಾಣಿಜ್ಯ ಅನಿಲ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮಲ್ಪೆಯ ಸನತ್ ಕಾಮತ್ (43) ಎಂಬವರು ಯಾವುದೇ ಪರವಾನಿಗೆ ಇಲ್ಲದೆ ಅನಿಲ ಸಿಲಿಂಡರ್‌ಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಮತ್ತು ಮಲ್ಪೆ ಪೊಲೀಸ್ ಠಾಣೆಯ ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿದರು.

ಜೂನ್ 3ರಂದು ಬೆಳಿಗ್ಗೆ ಸುಮಾರು 10:45 ಗಂಟೆಗೆ ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಮಲ್ಪೆ ಜಂಕ್ಷನ್ ಬಳಿಯ ಸನತ್ ಕಾಮತ್ ಅವರ ಮನೆ ಅಂಗಳದಲ್ಲಿ ಪರಿಶೀಲನೆ ನಡೆಸಿದ ವೇಳೆ, 19 ಕೆ.ಜಿ. ಸಾಮರ್ಥ್ಯದ 12 ವಾಣಿಜ್ಯ ಅನಿಲ ಸಿಲಿಂಡರ್‌ಗಳು ಹಾಗೂ 5 ಕೆ.ಜಿ. ಸಾಮರ್ಥ್ಯದ 9 ವಾಣಿಜ್ಯ ಸಿಲಿಂಡರ್‌ಗಳು ಪತ್ತೆಯಾದವು. ಇದರಲ್ಲಿ ಒಂದು 19 ಕೆ.ಜಿ. ಸಿಲಿಂಡರ್ ಅನಿಲ ತುಂಬಿದ ಸ್ಥಿತಿಯಲ್ಲಿತ್ತು.

ಆಹಾರ ಶಿರಸ್ತೇದಾರರಾದ ಆಶಾ ಕೆ. ಹಾಗೂ ಆಹಾರ ನಿರೀಕ್ಷಕರಾದ ಹಿತೇಶ್ ಯು.ಬಿ. ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಗೆ ಮಲ್ಪೆ ಪೊಲೀಸ್ ಠಾಣೆಯ ಪಿಎಸ್‌ಐ ಅನೀಲ್ ಕುಮಾರ್ ಮತ್ತು ಸಿಬ್ಬಂದಿ ಸಹಕಾರ ನೀಡಿದರು.

ವಿಚಾರಣೆ ವೇಳೆ ಸನತ್ ಕಾಮತ್ ಅವರು ಮೀನುಗಾರಿಕಾ ಉದ್ದೇಶಕ್ಕಾಗಿ ಬಳಸುವವರಿಗೆ ವಾಣಿಜ್ಯ ಸಿಲಿಂಡರ್‌ಗಳನ್ನು ಮಾರಾಟ ಮಾಡಲು ದಾಸ್ತಾನು ಇರಿಸಿರುವುದಾಗಿ ಒಪ್ಪಿಕೊಂಡಿದ್ದು, ಅದಕ್ಕೆ ಸಂಬಂಧಿಸಿದ ಯಾವುದೇ ಪರವಾನಿಗೆ ಅಥವಾ ದಾಖಲೆಗಳನ್ನು ಹೊಂದಿರಲಿಲ್ಲ ಎಂದು ತಿಳಿದುಬಂದಿದೆ. ಬಳಿಕ ಅಧಿಕಾರಿಗಳು ಸಿಲಿಂಡರ್‌ಗಳನ್ನು ಮಹಜರು ಮೂಲಕ ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 63/2026 ಅಡಿಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ (Essential Commodities Act) 1955ರ ಕಲಂ 3 ಮತ್ತು 7 ಹಾಗೂ Liquefied Petroleum Gas (Regulation of Supply and Distribution) Order, 2000ರ ಕಲಂ 4 ಮತ್ತು 7ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article