ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ, ಮಾರಾಟವಾಗಿದೆ: ತಪ್ಪಿತಸ್ಥರ ವಿರುದ್ಧ ಕ್ರಮವಹಿಸಿ: ಜಯಪ್ರಕಾಶ್ ಹೆಗ್ಡೆ
ನೀಟ್ ಪರಿಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದಲ್ಲ. ಪ್ರಶ್ನೆ ಪತ್ರಿಕೆಯನ್ನು ಮಾರಾಟ ಮಾಡಲಾಗಿದೆ. ಹಾಗಾಗಿ ಮಾರಾಟ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಒತ್ತಾಯಿಸಿದರು.
SIR ಪ್ರಕ್ರಿಯೆ, NEET ಹಗರಣ ಹಾಗೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಲೆ ಏರಿಕೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಜೋಡುಕಟ್ಟೆ ಬಳಿ ನಡೆದ ಪ್ರತಿಭಟನಾಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಮರು ಪರೀಕ್ಷೆ ಮಾಡುವ ಮೂಲಕ ವಿದ್ಯಾರ್ಥಿಗಳ ಮೇಲೆ ಹೊರೆ ಏರಿಸುವುದು ಸರಿಯಲ್ಲ. ಮುಂದಿನ ವರ್ಷದಿಂದ ರಾಜ್ಯಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸಿ ರಾಜ್ಯದ ಮಕ್ಕಳಿಗೆ ನೀಟ್ ಪರೀಕ್ಷೆ ಬರೆಯಲು ಸೀಟು ಸಿಗುವಂತಾಗಬೇಕೆಂದು ಆಗ್ರಹಿಸಿದರು.
ಕಚ್ಚಾ ತೈಲಗಳ ಬೆಲೆ ಏರಿಕೆಯಾಗಲು ಕೇಂದ್ರಸರ್ಕಾರವೇ ಕಾರಣ ಎಂದ ಜಯಪ್ರಕಾಶ್ ಹೆಗ್ಡೆ, ದೇಶಿ ನೀತಿಯನ್ನು ಜನಸಾಮಾನ್ಯರ ಮೇಲೆ ಹೊರೆಸಬೇಡಿ ಎಂದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಯನ್ನು ಕಲಿಯಿರಿ. ಆ ಮೂಲಕ ದೇಶದ ಜನತೆಯನ್ನು ಸಂಕಷ್ಟದಿಂದ ಪಾರು ಮಾಡಿ ಎಂದರು.
ಎಸ್.ಐ ಆರ್ ಬಗ್ಗೆ ಮಾತನಾಡಿದ ಎಂ.ಎ ಗಫೂರ್, ಕೇಂದ್ರ ಸರ್ಕಾರವು ಮತದಾನದ ಹಕ್ಕನ್ನು ಛೋರ್ ಮಾಡುವ ಪ್ರಯತ್ನವನ್ನು ಮಾಡಲು ಹೊರಟಿದೆ. ಬಿಹಾರದಲ್ಲಿ ಮೂವತೈದು ಲಕ್ಷ ಮತಗಳು ಕಾಣೆಯಾಗಿದೆ. ಪ್ರಜಾಪ್ರಭುತ್ವ ಅಂಗ ಸಂಸ್ಥೆ ಸಿಬಿಐ ಅನ್ನು ಕೂಡಾ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಾವು ಜಾಗೃತರಾಗಬೇಕಾಗಿದೆ. ಮತದಾರ ಪರಿಷ್ಕರಣೆ ಬಗ್ಗೆ ಜಾಗೃತಿ ಮಾಡುವ ಅವಶ್ಯಕತೆ ಇದೆ ಎಂದರು.
ಬ್ರಹ್ಮಗಿರಿಯ ಕಾಂಗ್ರೆಸ್ ಭವನದಿಂದ ಆರಂಭವಾದ ಕಾಲ್ನಡಿಗೆ ಮೆರವಣಿಗೆ ಬ್ರಹ್ಮಗಿರಿ ಸರ್ಕಲ್ ಮೂಲಕ ಜೋಡುಕಟ್ಟೆಯವರೆಗೆ ಸಾಗಿತು. ಪ್ರತಿಭಟನೆಯ ವಿಶೇಷ ಆಕರ್ಷಣೆಯಾಗಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಸದಸ್ಯರು ಸೈಕಲ್‌ಗಳಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿ ಜನರ ಗಮನ ಸೆಳೆದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಮುಖರಾದ ಗೋಪಾಲ ಪೂಜಾರಿ,ಅಶೋಕ್ ಕುಮಾರ್ ಕೊಡವೂರು, ಮುನಿಯಾಲು ಉದಯಕುಮಾರ್ ಶೆಟ್ಟಿ,ಅಲೆವೂರು ಹರೀಶ್ ಕಿಣಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ದಿನೇಶ ಪುತ್ರನ್ , ಹರಿಪ್ರಸಾದ್ ರೈ, ಕೀರ್ತಿ ಶೆಟ್ಟಿ, ಮಹಾಬಲ ಕುಂದರ್, ಹರೀಶ್ ಕಿಣಿ, ಕೃಷ್ಣ ಶೆಟ್ಟಿ, ಮಂಜುನಾಥ್ ಪೂಜಾರಿ ದಿನೇಶ್ ಹೆರೂರು ಸಂತೋಷ್ ಕುಮಾರ್ ಗೋಪಿನಾಥ್ ಭಟ್, ಸೌರಭ್ ಬಲ್ಲಾಳ್ ಮೊದಲಾದವರು ಭಾಗವಹಿಸಿದ್ದರು.


