-->
ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು: 24 ಗಂಟೆಯೊಳಗೆ ಆರೋಪಿ ಬಂಧನ

ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು: 24 ಗಂಟೆಯೊಳಗೆ ಆರೋಪಿ ಬಂಧನ


ಕೊಲ್ಲೂರು ಸಮೀಪದ ದಳಿ ಪ್ರದೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೇರಳ ಮೂಲದ ಮಹಿಳಾ ಯಾತ್ರಾರ್ಥಿಯೊಬ್ಬರ ಮೈಮೇಲಿದ್ದ ಚಿನ್ನಾಭರಣ ಕಳವು ಪ್ರಕರಣವನ್ನು ಕೊಲ್ಲೂರು ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 


ಬಂಧಿತ ಆರೋಪಿಯನ್ನು ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ ನಿವಾಸಿ ಹೇಮಂತ್ (40) ಎಂದು ಗುರುತಿಸಲಾಗಿದೆ.

 ಮೇ 17ರಂದು ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ದಳಿ ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ಮಹಿಳಾ ಯಾತ್ರಾರ್ಥಿಗಳು ಮೃತಪಟ್ಟಿದ್ದರು. ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪಘಾತದಲ್ಲಿ ಮೃತಪಟ್ಟ ಮಹಿಳೆಯೊಬ್ಬರ ಮೈಮೇಲಿದ್ದ ಚಿನ್ನಾಭರಣಗಳನ್ನು ಯಾರೋ ಕಳವು ಮಾಡಿರುವ ಕುರಿತು ಶ್ರೀಕುಮಾರ ಎಂಬವರು ನೀಡಿದ ದೂರಿನ ಮೇರೆಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಹಾಗೂ ಬೈಂದೂರು ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ ಅವರ ಮಾರ್ಗದರ್ಶನದಲ್ಲಿ ಕೊಲ್ಲೂರು ಠಾಣೆಯ ಉಪನಿರೀಕ್ಷಕ ವಿನಯ ಎಂ. ಕೊರ್ಲಹಳ್ಳಿ ಹಾಗೂ ಸಿಬ್ಬಂದಿಗಳಾದ ನಾಗೇಂದ್ರ, ಲಕ್ಷ್ಮಣ ಗಾಣಿಗ, ರಾಘವೇಂದ್ರ ಮತ್ತು ನಾಗರಾಜ ವಿಶೇಷ ಕಾರ್ಯಾಚರಣೆ ನಡೆಸಿ, ಸಿಸಿಟಿವಿ ದೃಶ್ಯಾವಳಿ, ಸ್ಥಳದಲ್ಲಿದ್ದ ಸಾರ್ವಜನಿಕರು ತೆಗೆದ ಛಾಯಾಚಿತ್ರಗಳು ಹಾಗೂ ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು, ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯಿಂದ 3.910 ಗ್ರಾಂ ತೂಕದ ಉಂಗುರ, 3.450 ಗ್ರಾಂ ತೂಕದ ಬಳೆ ಹಾಗೂ 7.160 ಗ್ರಾಂ ತೂಕದ ಚಿನ್ನದ ಸರ ಸೇರಿದಂತೆ ಒಟ್ಟು ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. 

Ads on article

Advertise in articles 1

advertising articles 2

Advertise under the article