ಬ್ಲಾಕ್‌ಲಿಸ್ಟ್ ಮೊಬೈಲ್ ಪತ್ತೆ; ಪೊಲೀಸರಿಗೆ ಹಸ್ತಾಂತರಿಸಿದ ವ್ಯಾಪಾರಿಗಳು
ಉಡುಪಿ ಜಿಲ್ಲೆಯ ವಿವಿಧ ಮೊಬೈಲ್ ಅಂಗಡಿಗಳಿಗೆ ಅಪರಿಚಿತ ವ್ಯಕ್ತಿಗಳು ದುಬಾರಿ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡಲು ಬಂದ ಘಟನೆಗಳು ಅನುಮಾನಕ್ಕೆ ಕಾರಣವಾಗಿದ್ದು, ಪರಿಶೀಲನೆ ವೇಳೆ ಬ್ಲಾಕ್ ಲಿಸ್ಟ್ ನಲ್ಲಿದ್ದ ಏಳು ಮೊಬೈಲ್ ಗಳನ್ನು ಅಂಗಡಿ ಮಾಲೀಕರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಮೊಬೈಲ್ ಮಾರಾಟಕ್ಕೆ ಬಂದ ವ್ಯಕ್ತಿಗಳ ವರ್ತನೆ ಬಗ್ಗೆ ಅನುಮಾನಗೊಂಡ ಅಂಗಡಿ ಮಾಲಕರು, ಸಂಚಾರ್ ಸಾಥಿ ಆ್ಯಪ್ ಮೂಲಕ ಮೊಬೈಲ್‌ಗಳ ಮಾಹಿತಿ ಪರಿಶೀಲಿಸಿದರು. ಈ ವೇಳೆ ಮೊಬೈಲ್‌ಗಳು ಬ್ಲಾಕ್‌ಲಿಸ್ಟ್‌ನಲ್ಲಿ ಇರುವುದಾಗಿ ಪತ್ತೆಯಾಯಿತು. ಬಳಿಕ ಮೊಬೈಲ್‌ಗಳ ಖರೀದಿ ಸಂಬಂಧ ದಾಖಲೆಗಳನ್ನು ಕೇಳಿದಾಗ, ಸಂಬಂಧಪಟ್ಟವರು ಯಾವುದೇ ದಾಖಲೆಗಳನ್ನು ನೀಡದೇ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಮೊಬೈಲ್ ರಿಟೈಲರ್ ಅಸೋಸಿಯೇಷನ್ ಅಧ್ಯಕ್ಷ ವಿವೇಕ್ ಜಿ. ಸುವರ್ಣ ಹಾಗೂ ಸದಸ್ಯರಾದ ರಂಜಿತ್ ಶೆಟ್ಟಿ, ಸಂದೇಶ್, ಸುಧರ್ಶನ್, ಗಣೇಶ್ ಮತ್ತು ಅಭಿಷೇಕ್ ಅವರು ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ ಲಕ್ಷಾಂತರ ರೂಪಾಯಿ ಮೌಲ್ಯದ ಏಳು ಮೊಬೈಲ್ ಫೋನ್‌ಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಹಸ್ತಾಂತರಿಸಿದರು.
ಪೊಲೀಸರಿಗೆ ಒಪ್ಪಿಸಲಾದ ಮೊಬೈಲ್‌ಗಳಲ್ಲಿ ರೆಡ್ಮಿ, ಸ್ಯಾಮ್ಸಂಗ್, ರಿಯಲ್‌ಮಿ, ಐಕ್ಯೂಒ ಸೇರಿದಂತೆ ವಿವಿಧ ಕಂಪನಿಗಳ ದುಬಾರಿ ಮಾದರಿಗಳು ಸೇರಿವೆ. ಅದರಲ್ಲೂ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್24 ಅಲ್ಟ್ರಾ ಮಾದರಿಯಂತಹ ಹೈಎಂಡ್ ಮೊಬೈಲ್ ಕೂಡ ಪತ್ತೆಯಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಸಿಇಐಆರ್ ಪೋರ್ಟಲ್ ಮೂಲಕ ಮೊಬೈಲ್‌ಗಳ ಮೂಲ ಮಾಲೀಕರನ್ನು ಪತ್ತೆಹಚ್ಚಿ, ಕಾನೂನು ಪ್ರಕ್ರಿಯೆಯಂತೆ ಅವರಿಗೇ ಹಸ್ತಾಂತರಿಸಲಾಗುವುದು.
ಈ ಕುರಿತು ಸಾರ್ವಜನಿಕರು ಹಾಗೂ ಮೊಬೈಲ್ ವ್ಯಾಪಾರಿಗಳಿಗೆ ಪೊಲೀಸ್ ಇಲಾಖೆ ಕೆಲ ಮಹತ್ವದ ಸೂಚನೆಗಳನ್ನು ನೀಡಿದೆ. ಅಪರಿಚಿತ ವ್ಯಕ್ತಿಗಳು ಮೊಬೈಲ್ ಮಾರಾಟಕ್ಕೆ ಬಂದಲ್ಲಿ ಮೊದಲು ‘ಸಂಚಾರ್ ಸಾಥಿ’ ಆ್ಯಪ್ ಮೂಲಕ ಪರಿಶೀಲನೆ ನಡೆಸಬೇಕು. ಪರಿಶೀಲನೆ ವೇಳೆ ಅಂಗಡಿ ಮಾಲೀಕರು ತಮ್ಮ ಸ್ವಂತ ಸಿಮ್ ಕಾರ್ಡ್ ಬಳಸದೇ, ಗ್ರಾಹಕರ ಸಿಮ್ ಕಾರ್ಡ್‌ನನ್ನೇ ಬಳಸಬೇಕು ಎಂದು ಸೂಚಿಸಲಾಗಿದೆ.
ಇದೇ ವೇಳೆ, ಸೂಕ್ತ ದಾಖಲೆಗಳಿಲ್ಲದ ಮೊಬೈಲ್‌ಗಳನ್ನು ಖರೀದಿಸುವುದು ಅಥವಾ ಸ್ವೀಕರಿಸುವುದನ್ನು ತಪ್ಪಿಸಬೇಕು. ಯಾವುದೇ ಅನುಮಾನಾಸ್ಪದ ವ್ಯವಹಾರ ಕಂಡುಬಂದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
