ಕರಾವಳಿಯಲ್ಲಿ ಹಲಸಿನ ಹಣ್ಣಿಗೆ ಭಾರೀ ಡಿಮ್ಯಾಂಡ್..!
Friday, June 05, 2026
ಒಂದು ಕಾಲದಲ್ಲಿ ಬಡವರ ಹಣ್ಣು ಎಂದು ಕರೆಯಲ್ಪಡುತ್ತಿದ್ದ ಹಲಸಿನ ಹಣ್ಣು ಇಂದು ಕರಾವಳಿ ಕರ್ನಾಟಕದಲ್ಲಿ ಚಿನ್ನದ ಬೆಳೆ ಎಂಬ ಸ್ಥಾನಮಾನಕ್ಕೆ ಏರಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲಸಿನ ಹಣ್ಣು ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿರುವುದು ರೈತರಲ್ಲಿ ಹೊಸ ಆಶಾಭಾವವನ್ನು ಮೂಡಿಸಿದೆ.
ಕರಾವಳಿ ಭಾಗದ ಮನೆ ಮಠಗಳಲ್ಲಿ ಸಾಂಪ್ರದಾಯಿಕವಾಗಿ ಬಳಸಲಾಗುತ್ತಿದ್ದ ಹಲಸಿನ ಹಣ್ಣು ಈಗ ನಗರ ಮಾರುಕಟ್ಟೆಗಳು, ಹೋಟೆಲ್‌ಗಳು, ಆಹಾರ ಮೇಳಗಳು ಹಾಗೂ ಆನ್‌ಲೈನ್ ಮಾರಾಟ ವೇದಿಕೆಗಳಲ್ಲೂ ದೊಡ್ಡ ಪ್ರಮಾಣದಲ್ಲಿ ಜನಪ್ರಿಯತೆ ಗಳಿಸಿದೆ. ಹಲಸಿನ ಹಪ್ಪಳ, ಚಿಪ್ಸ್, ಹಲಸಿನ ಬೀಜದ ಉತ್ಪನ್ನಗಳು, ಹಲಸಿನ ಹಣ್ಣಿನ ಜ್ಯಾಂ ಮತ್ತು ವಿವಿಧ ಖಾದ್ಯಗಳಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಆಧುನಿಕ ಭರಾಟೆಯಲ್ಲಿ ಫಾಸ್ಟ್ ಫುಡ್ ಗಳೇ ಇಷ್ಟವಾಗುತ್ತಿದ್ದ ಕಾಲದಲ್ಲಿ ಹಲಸಿನ ಹಣ್ಣಿನ ಪ್ರಯೋಜನ, ಔಷಧೀಯ ಗುಣಗಳಿಂದಾಗಿ ಹಲಸಿಗೆ ಈಗ ಬೇಡಿಕೆ ಹೆಚ್ಚಾಗಿದೆ. ಈ ಬಾರಿ ಹಲಸಿನ ಹಣ್ಣಿನ ದರಗಳು ಎಂದೂ ಕಾಣದ ಮಟ್ಟಿಗೆ ಏರಿಕೆಯಾಗಿದ್ದು, ಒಂದು ಹಣ್ಣು 300 ರಿಂದ 400 ರೂಪಾಯಿವರೆಗೆ ಮಾರಾಟವಾಗುತ್ತಿದೆ. ರಸ್ತೆ ಬದಿಯಲ್ಲಿ ಒಂದು ತೊಳೆ 5 ರಿಂದ 8 ರೂಪಾಯಿಗೆ ಮಾರಾಟವಾಗುತ್ತಿದ್ದು, ಗಾತ್ರದ ಆಧಾರದ ಮೇಲೆ ಹಣ್ಣುಗಳನ್ನು ವಿಂಗಡಿಸಿ ಮಾರಾಟ ಮಾಡುವ ಪ್ರಕ್ರಿಯೆ ಜೋರಾಗಿದೆ.
ಲಾಭದ ರುಚಿ ಕಂಡ ಹಲಸಿನ ಹಣ್ಣಿನ ವ್ಯಾಪಾರಿಗಳು ಟೆಂಡರ್ ಮೂಲಕ ಹಣ್ಣು ಖರೀದಿಸಿ ಮಾರಾಟ ಮಾಡುತ್ತಿದ್ದಾರೆ. ಒಟ್ಟಿನಲ್ಲಿ, ಕರಾವಳಿ ಕರ್ನಾಟಕದಲ್ಲಿ ಹಲಸಿನ ಹಣ್ಣು ಕೇವಲ ಸಾಂಪ್ರದಾಯಿಕ ಹಣ್ಣಾಗಿಯೇ ಉಳಿಯದೆ, ರೈತರ ಆರ್ಥಿಕತೆಯನ್ನು ಬಲಪಡಿಸುವ ಹೊಸ ಕೃಷಿ ಅವಕಾಶವಾಗಿ ರೂಪುಗೊಳ್ಳುತ್ತಿದೆ. "ಮರದಲ್ಲೇ ಉಳಿಯುತ್ತಿದ್ದ ಹಲಸು" ಇಂದು "ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ತರುತ್ತಿರುವ ಬೆಳೆ"ಯಾಗಿ ಪರಿವರ್ತನೆಯಾಗಿರುವುದು ಕರಾವಳಿಯ ಕೃಷಿಕರಲ್ಲಿ ಮಂದಹಾಸ ಮೂಡಿಸಿದೆ.
.jpeg)
