ಕೋಕಾ ಕಾಯ್ದೆ ಪ್ರಕರಣದ ಇಬ್ಬರು ಆರೋಪಿಗಳ ಬಂಧನ
ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 208/2025ರ ಕೋಕಾ ಕಾಯ್ದೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾರ್ವಜನಿಕರಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಪ್ರಕರಣದ ಆರೋಪಿ ಚೇತನ್ @ ಚೇತು ಪಡೀಲ್ ಎಂಬಾತನನ್ನು ಎ.30ರಂದು ಬಂಧಿಸಲಾಗಿದ್ದು, ಮನೋಜ್ ಕುಲಾಲ್ @ ಮನೋಜ್ ಕೋಡಿಕೆರೆ ಎಂಬಾತನನ್ನು ಜೂ.11ರಂದು ದಸ್ತಗಿರಿ ಮಾಡಲಾಗಿದೆ.
ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಬಾತ್ಮೀದಾರರಿಗೆ ಪೊಲೀಸ್ ಇಲಾಖೆಯಿಂದ 50 ಸಾವಿರ ನಗದು ಬಹುಮಾನವನ್ನು ಘೋಷಿಸಲಾಗಿತ್ತು.
ಈ ಆರೋಪಿಗಳಲ್ಲಿ ಮನೋಜ್ ಕೋಡಿಕೆರೆ ವಿರುದ್ಧ ಉಡುಪಿ ಜಿಲ್ಲೆಯಲ್ಲಿ 2 ಮತ್ತು ಮಂಗಳೂರು ನಗರದಲ್ಲಿ 17 ಪ್ರಕರಣಗಳು, ಒಟ್ಟು 19 ಪ್ರಕರಣ ಗಳು ದಾಖಲಾಗಿದ್ದು, 3 ಕೊಲೆ ಪ್ರಕರಣ, 5 ಕೊಲೆ ಪ್ರಯತ್ನ ಪ್ರಕರಣ, 1 ಅಪಹರಣ ಪ್ರಕರಣ, 10 ಹಲ್ಲೆ ಮತ್ತು ದೊಂಬಿ ಪ್ರಕರಣಗಳು ದಾಖಲಾಗಿರುತ್ತದೆ.
ಆರೋಪಿ ಚೇತನ್ ವಿರುದ್ಧ ಉಡುಪಿ-2, ದಕ್ಷಿಣ ಕನ್ನಡ -2 ಮತ್ತು ಮಂಗಳೂರು ನಗರ-9 ಪ್ರಕರಣಗಳು ಸೇರಿದಂತೆ ಒಟ್ಟು 13 ಪ್ರಕರಣಗಳು ದಾಖಲಾಗಿದ್ದು, 2 ಕೊಲೆ, 2 ಕೊಲೆ ಪ್ರಯತ್ನ ಪ್ರಕರಣ, 1 ಅಪಹರಣ ಪ್ರಕರಣ, 2 ಮಾದಕ ದ್ರವ್ಯ ಸೇವನೆ ಮತ್ತು 6 ಹಲ್ಲೆ ಮತ್ತು ದೊಂಬಿ ಪ್ರಕರಣಗಳು ದಾಖಲಾಗಿರುತ್ತದೆ.