ತೊಟ್ಟಂ ಹೋಂ ಸ್ಟೇ ಮೇಲೆ ದಾಳಿ: ಗಾಂಜಾ,ಎಂಡಿಎಂಎ ವಶ, 7 ಮಂದಿ ಬಂಧನ
ಉಡುಪಿ ತಾಲೂಕಿನ ತೆಂಕನಿಡಿಯೂರು ಗ್ರಾಮದ ತೊಟ್ಟಂ ಚರ್ಚ್ ಸಮೀಪದ ವಿಶ್ರಾಮ್ ಹೋಂ ಸ್ಟೇ ಮೇಲೆ ದಾಳಿ ನಡೆಸಿದ ಮಲ್ಪೆ ಪೊಲೀಸರು ಗಾಂಜಾ, ಎಂಡಿಎಂಎ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡು 7 ಮಂದಿಯನ್ನು ಬಂಧಿಸಿದ್ದಾರೆ.
ಎಫ್.ಎಂ. ನಾಜೀಲ್, ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ಅಫ್ನಾನ್ ಹಾಗೂ ವಿಘ್ನೇಶ್, ಗೀತಾಂಜಲಿ ಜೀನ, ಹೋಂ ಸ್ಟೇ ಮಾಲೀಕ ಧನ್ವತ್ ರಿಕೀತ್ ಹಾಗೂ ಸಿಬ್ಬಂದಿ ಬಸವರಾಜು ಬಂಧಿತರು. ಮಾದಕ ವಸ್ತುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪವಿಭಾಗ ಹಾಗೂ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನೀಲ್ ಕುಮಾರ್ ಡಿ. (ಕಾನೂನು ಮತ್ತು ಸುವ್ಯವಸ್ಥೆ), ಪಿಎಸ್ಐ ಗಂಗಪ್ಪ ಎಸ್. (ತನಿಖೆ) ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿದೆ.
ದಾಳಿಯ ವೇಳೆ ಹೋಂ ಸ್ಟೇಯ ಒಂದು ಕೊಠಡಿಯಲ್ಲಿ ಎಫ್.ಎಂ. ನಾಜೀಲ್, ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ಅಫ್ನಾನ್ ಹಾಗೂ ವಿಘ್ನೇಶ್ ಎಂಬ ನಾಲ್ವರನ್ನು ಪರಿಶೀಲಿಸಿದಾಗ ಅವರು ಮಾದಕ ವಸ್ತು ಸೇವನೆ ಮಾಡಿರುವುದು ಪತ್ತೆಯಾಯಿತು. 33.81 ಗ್ರಾಂ ಗಾಂಜಾ (ಅಂದಾಜು ಮೌಲ್ಯ ₹3,000), 9.73 ಗ್ರಾಂ ಎಂಡಿಎಂಎ (ಅಂದಾಜು ಮೌಲ್ಯ ₹20,000), ಐದು ಮೊಬೈಲ್ ಫೋನ್ಗಳು ಹಾಗೂ ಇತರ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರವಾಸೋದ್ಯಮ ಇಲಾಖೆ ಮತ್ತು ಮಲ್ಪೆ ಪೊಲೀಸ್ ಠಾಣೆಯಿಂದ ಅನಧಿಕೃತವಾಗಿ ಹೋಂ ಸ್ಟೇ ನಡೆಸದಂತೆ ಈ ಹಿಂದೆ ನೋಟಿಸ್ ನೀಡಲಾಗಿದ್ದರೂ, ಅಕ್ರಮವಾಗಿ ಹೋಂ ಸ್ಟೇ ನಡೆಸಿ ಮಾದಕ ವಸ್ತುಗಳ ಸೇವನೆಗೆ ಸಹಕರಿಸಿದ ಆರೋಪದ ಮೇಲೆ ಹೋಂ ಸ್ಟೇ ಮಾಲೀಕ ಧನ್ವತ್ ರಿಕೀತ್ ಹಾಗೂ ಸಿಬ್ಬಂದಿ ಬಸವರಾಜು ಅವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೀತಾಂಜಲಿ ಜಿನಾ ಎಂಬವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 67/2026ರಡಿ ಎನ್ಡಿಪಿಎಸ್ ಕಾಯ್ದೆಯ ಕಲಂ 8(a), 20(b)(ii)(a) ಮತ್ತು 22(b) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.