ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಅವ್ಯವಹಾರ ಆರೋಪ
Monday, June 22, 2026
ಬೈಂದೂರು ತಾಲೂಕಿನ ನಾಡ ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘವು ಅವ್ಯವಹಾರ ನಡೆದಿದ್ದು, ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಸಹಕಾರಿ ಸಂಘದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿರುವುದು ಲೆಕ್ಕ ಪರಿಶೋಧನಾ ವರದಿಯಲ್ಲಿ ತಿಳಿದು ಬಂದಿದ್ದು, ಈವರೆಗೆ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಸಂಘದ ಅಧ್ಯಕ್ಷ ರಾಜೀವ ಮೊಗವೀರ ಅವರು ಹಾಗೂ ಅವರ ಸಂಬಂಧಿಕರು ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದಾರೆ. ಅಡಮಾನ ಸಾಲ ನೀಡುವಾಗ ಕಾನೂನು ತಜ್ಞ ಸಲಹೆ ಪಡೆಯದೇ ಸಾಲ ನೀಡಿದ್ದಾರೆ ಎಂದು ಆರೋಪಿಸಿದ ದಿನೇಶ್, ಈ ರೀತಿಯಾದರೆ ಠೇವಣಿದಾರರ ಗತಿಯೇನು? ಎಂದು ಪ್ರಶ್ನಿಸಿದ್ದಾರೆ.
ಸಹಕಾರಿ ಸಂಘವು ನೀಡಿದ ಸಾಲಗಳಿಗೆ ಭದ್ರತೆ ಇಲ್ಲ ಎಂದು ಲೆಕ್ಕಪರಿಶೋಧನ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಬಗ್ಗೆ ನ್ಯಾಯ ಸಮ್ಮತ ತನಿಖೆ ಮಾಡದಿದ್ದರೆ ಮೇಲು ಕಾನೂನು ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಟಿಯಲ್ಲಿ ಪ್ರವೀಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.