-->
 "ಕರಾವಳಿ ರಂಗಾಯಣ ಕಾರ್ಕಳ": ಕಲೆ–ಸಂಸ್ಕೃತಿ ವಿಸ್ತರಣೆಗೆ ಹೊಸ ಹೆಜ್ಜೆ

"ಕರಾವಳಿ ರಂಗಾಯಣ ಕಾರ್ಕಳ": ಕಲೆ–ಸಂಸ್ಕೃತಿ ವಿಸ್ತರಣೆಗೆ ಹೊಸ ಹೆಜ್ಜೆ


ಯುವಜನರನ್ನು ಸಾಂಸ್ಕೃತಿಕ ಚಟುವಟಿಕೆಗಳತ್ತ ಸೆಳೆಯುತ್ತಿರುವ "ಯಕ್ಷ ರಂಗಾಯಣ ಕಾರ್ಕಳ" ಇನ್ನು ಮುಂದೆ "ಕರಾವಳಿ ರಂಗಾಯಣ ಕಾರ್ಕಳ" ಎಂಬ ಹೆಸರಿನೊಂದಿಗೆ ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದೆ ಎಂದು ನಿರ್ದೇಶಕ ಬಿ.ಆರ್ ವೆಂಕಟರಮಣ ಐತಾಳ್ ತಿಳಿಸಿದ್ದಾರೆ.

ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ‘ಯಕ್ಷ ರಂಗಾಯಣ ಕಾರ್ಕಳ’ ಎಂಬ ಹೆಸರಿನ ಬಗ್ಗೆ ಸಾಹಿತಿಗಳು, ವಿದ್ವಾಂಸರು ಹಾಗೂ ಸಾರ್ವಜನಿಕ ವಲಯದಲ್ಲಿ ಇದು ಯಕ್ಷಗಾನಕ್ಕೆ ಸಂಬಂಧಿಸಿದ ರಂಗಾಯಣ ಎಂಬ ಅಭಿಪ್ರಾಯ ಮತ್ತು ಗೊಂದಲ ವ್ಯಕ್ತವಾಗುತ್ತಿತ್ತು. ಈಗಾಗಲೇ ಯಕ್ಷಗಾನ ಕ್ಷೇತ್ರದಲ್ಲಿ ಯಕ್ಷಗಾನ ಕೇಂದ್ರ ಹಾಗೂ ಯಕ್ಷಗಾನ ಅಕಾಡೆಮಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಗೊಂದಲ ನಿವಾರಣೆಯ ಅಗತ್ಯತೆ ಕುರಿತು ಚರ್ಚೆಗಳು ನಡೆದಿದ್ದವು.

ಈ ಹಿನ್ನೆಲೆಯಲ್ಲಿ ‘ಯಕ್ಷ ರಂಗಾಯಣ’ ಎಂಬ ಹೆಸರಿನ ಅರ್ಥವ್ಯಾಪ್ತಿಯನ್ನು ವಿಸ್ತರಿಸಿ, ಯಕ್ಷಗಾನದ ತವರು ನೆಲೆಯಾದ ಕರಾವಳಿಯ ಕಲೆ, ಸಂಸ್ಕೃತಿ, ಸತ್ಯ ಮತ್ತು ಸೊಗಡನ್ನು ಒಳಗೊಂಡ ರಂಗಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಹಾಗೂ 1993ರಲ್ಲಿ ರಚಿಸಲಾದ ರಂಗಾಯಣದ ಬೈಲಾದಲ್ಲಿ ‘ಕರಾವಳಿ ರಂಗಾಯಣ’ ಎಂದು ಉಲ್ಲೇಖಿಸಿರುವುದನ್ನೂ ಪರಿಗಣಿಸಿ, ಸಂಸ್ಥೆಯ ಹೆಸರನ್ನು ‘ಕರಾವಳಿ ರಂಗಾಯಣ ಕಾರ್ಕಳ’ ಎಂದು ಬದಲಾಯಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಹೊಸ ಹೆಸರಿನೊಂದಿಗೆ ಕರಾವಳಿ ಭಾಗದ ರಂಗಭೂಮಿ, ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರಾಜ್ಯದಾದ್ಯಂತ ಪರಿಚಯಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು. 

ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ್ ಎಕ್ಕಾರ್ ಮಾತನಾಡಿ, ಡಾ. ಶಿವರಾಮ ಕಾರಂತರ ಬದುಕು, ಸಾಹಿತ್ಯ, ಚಿಂತನೆಗಳು ಹಾಗೂ ಬಹುಮುಖ ಸಾಧನೆಯನ್ನು ಜನಸಾಮಾನ್ಯರಿಗೆ, ವಿಶೇಷವಾಗಿ ಯುವಜನರಿಗೆ ತಲುಪಿಸುವ ಉದ್ದೇಶದಿಂದ 2002ರಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟ್ ಒಂದೂವರೆ ವರ್ಷಗಳ ಅವಧಿಯಲ್ಲಿ ಒಟ್ಟು 54 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಉಡುಪಿ ಜಿಲ್ಲೆಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕಾರಂತರ ವಿಚಾರಧಾರೆಯನ್ನು ವ್ಯಾಪಕವಾಗಿ ಜನರಿಗೆ ತಲುಪಿಸುವ ಕಾರ್ಯ ನಡೆದಿದೆ.

ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ “ಅರಿವಿನ ಬೆಳಕು” ಉಪನ್ಯಾಸ ಮಾಲೆಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ಸಾಮಾಜಿಕ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ “ಮಕ್ಕಳಿಗಾಗಿ ಕಾರಂತರು” ಕಾರ್ಯಕ್ರಮದ ಮೂಲಕ ಚಿತ್ರಕಲೆ, ರಂಗೋಲಿ ಹಾಗೂ ಇತರೆ ಸೃಜನಾತ್ಮಕ ಚಟುವಟಿಕೆಗಳೊಂದಿಗೆ ಡಾ. ಕಾರಂತರ ಜೀವನ ಮತ್ತು ಸಾಹಿತ್ಯ ಪರಿಚಯಿಸುವ ಕಾರ್ಯ ಕೈಗೊಳ್ಳಲಾಗಿದೆ.

ಇದಲ್ಲದೆ ಕಥೆ, ಕಾದಂಬರಿ, ನಾಟಕ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಕುರಿತು ಒಂದು ದಿನದ ಅಧ್ಯಯನ ಶಿಬಿರಗಳನ್ನು ನಿಯಮಿತವಾಗಿ ಆಯೋಜಿಸಲಾಗುತ್ತಿದ್ದು, ಸಾಹಿತ್ಯಾಸಕ್ತರು ಮತ್ತು ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು. 

Ads on article

Advertise in articles 1

advertising articles 2

Advertise under the article