-->
ಮಣಿಪಾಲ ಶಾಲಾ ಬಸ್ ಅಪಘಾತ ಪ್ರಕರಣ: ಲೈಸೆನ್ಸ್ ಇಲ್ಲದೇ ಬಸ್ ಚಲಾಯಿಸಿದ್ದ ಕಂಡಕ್ಟರ್ ಅರೆಸ್ಟ್

ಮಣಿಪಾಲ ಶಾಲಾ ಬಸ್ ಅಪಘಾತ ಪ್ರಕರಣ: ಲೈಸೆನ್ಸ್ ಇಲ್ಲದೇ ಬಸ್ ಚಲಾಯಿಸಿದ್ದ ಕಂಡಕ್ಟರ್ ಅರೆಸ್ಟ್


ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಶಾಲಾ ಬಸ್ ಅಪಘಾತ ಪ್ರಕರಣದ ತನಿಖೆಯಲ್ಲಿ ಮಹತ್ವದ ತಿರುವು ದೊರೆತಿದ್ದು, ಬಸ್ ಚಾಲನೆ ಮಾಡುತ್ತಿದ್ದ ಕಂಡಕ್ಟರ್ ನನ್ನು ಪೊಲೀಸರು ಬಂಧಿಸಿದ್ದಾರೆ. 

ಬಸ್ ಕಂಡಕ್ಟರ್‌ನಾಗಿದ್ದ ಯುವಕನೇ ಬಸ್ ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾಗಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದ್ದು, ಅದರಂತೆ ಕಟಪಾಡಿ ನಿವಾಸಿ ಬಸ್ ಕಂಡಕ್ಟರ್ ಮಹಮ್ಮದ್ ರಾಹಿಜ್ (20)ಎಂಬತನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. 

ಜೂನ್ 25 ರಂದು ಬೆಳಿಗ್ಗೆ ಮಣಿಪಾಲ ಸಿಂಡಿಕೇಟ್ ಸರ್ಕಲ್ ಸಮೀಪ ಪೆರಂಪಳ್ಳಿಯ ಅಲ್ ಇಬಾದ್ ಇಂಡಿಯನ್ ಶಾಲೆಗೆ ಸೇರಿದ ಶಾಲಾ ಬಸ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಬಸ್‌ನಲ್ಲಿದ್ದ ಶಾಲಾ ಮಕ್ಕಳು ಗಾಯಗೊಂಡಿದ್ದರು.

ಅಪಘಾತದ ಬಳಿಕ ರಾಹಿಜ್ ತನ್ನ ತಂದೆ ರಿಜ್ವಾನ್ ಬಸ್ ಚಾಲನೆ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ದೂರು ನೀಡಿದ್ದರು. 

ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮಹಮ್ಮದ್ ರಾಹಿಜ್ ತಾನೇ ಬಸ್ ಚಾಲನೆ ಮಾಡುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದಿರುವುದು ದೃಢಪಟ್ಟಿದೆ.

ತನಿಖೆಯಲ್ಲಿ, ಆರೋಪಿಗೆ ಚಾಲನಾ ಪರವಾನಗಿ ಇಲ್ಲದಿದ್ದರೂ ಶಾಲಾ ಬಸ್ ಚಾಲನೆ ಮಾಡಿರುವುದು ಬಹಿರಂಗವಾಗಿದೆ. ಜೊತೆಗೆ, ಅಪಘಾತದ ಬಳಿಕ ತನ್ನ ತಂದೆಯ ವಿರುದ್ಧ ಸುಳ್ಳು ದೂರು ನೀಡಿ ತನಿಖೆಯನ್ನು ದಿಕ್ಕು ತಪ್ಪಿಸಲು ಯತ್ನಿಸಿದ್ದಾನೆ ಎಂಬುದೂ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ ರಾಹಿಜ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Ads on article

Advertise in articles 1

advertising articles 2

Advertise under the article