ಮಲ್ಪೆಯಲ್ಲಿ ಮುಳುಗಡೆಯಾಗಿದ್ದ ಮೀನುಗಾರಿಕಾ ದೋಣಿ ಉಚ್ಚಿಲ ಕಡಲ ತೀರದಲ್ಲಿ ಪತ್ತೆ
ಸಮುದ್ರದಲ್ಲಿ ನೀರು ತುಂಬಿ ಅಪಘಾತಕ್ಕೊಳಗಾಗಿದ್ದ ಮಲ್ಪೆ ನೋಂದಣಿಯ ‘ಮಂಜು ಮಾತ’ ಗಿಲ್‌ನೆಟ್ ಮೀನುಗಾರಿಕಾ ದೋಣಿ ಶುಕ್ರವಾರ ಸಂಜೆ ಉಡುಪಿ ಜಿಲ್ಲೆಯ ಹೆಜಮಾಡಿ ಸಿಎಸ್‌ಪಿ ಠಾಣಾ ವ್ಯಾಪ್ತಿಯ ಎರ್ಮಾಳು ಬಡಾ ಗ್ರಾಮದ ಉಚ್ಚಿಲ ಕಡಲ ತೀರಕ್ಕೆ ತೇಲಿ ಬಂದಿದೆ.
ಜೂನ್ 29ರಂದು ಬೆಳಿಗ್ಗೆ ಮಲ್ಪೆ ಬಂದರಿನಿಂದ ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಈ ದೋಣಿಯ ತಳಭಾಗದಿಂದ ಮಧ್ಯಾಹ್ನ ನೀರು ಸೋರಿಕೆಯಾಗತೊಡಗಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಭಾರತೀಯ ಕರಾವಳಿ ಕಾವಲು ಪಡೆಯ (ಕೋಸ್ಟ್‌ಗಾರ್ಡ್) ಸಹಾಯ ಕೋರಲಾಗಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಕರಾವಳಿ ಕಾವಲು ಪಡೆ ಸಿಬ್ಬಂದಿ ದೋಣಿಯಲ್ಲಿದ್ದ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದ್ದರು. ಆದರೆ ದೋಣಿಯನ್ನು ರಕ್ಷಿಸಲು ಸಾಧ್ಯವಾಗದ ಕಾರಣ ಅದನ್ನು ಸಮುದ್ರದಲ್ಲೇ ಬಿಟ್ಟು ಕಾರ್ಯಾಚರಣೆ ಪೂರ್ಣಗೊಳಿಸಲಾಗಿತ್ತು.
ನಂತರ ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಹೆಜಮಾಡಿ ಸಿಎಸ್‌ಪಿ ಠಾಣೆ, ಮೀನುಗಾರಿಕಾ ಇಲಾಖೆ, ಇಮಿಗ್ರೇಶನ್ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮೀನುಗಾರರನ್ನು ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲಿಸಿದರು. ರಕ್ಷಿಸಲ್ಪಟ್ಟವರಲ್ಲಿ ನಾಲ್ವರು ತಮಿಳುನಾಡು ಹಾಗೂ ಇಬ್ಬರು ಕೇರಳ ಮೂಲದವರಾಗಿರುವುದು ದೃಢಪಟ್ಟಿದೆ.
ಜಿಲ್ಲಾಧಿಕಾರಿಗಳ ಮೀನುಗಾರಿಕಾ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಕಾನೂನುಬಾಹಿರವಾಗಿ ಮೀನುಗಾರಿಕೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ದೋಣಿ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ದೋಣಿಯ ಲೈಸೆನ್ಸ್ ಮತ್ತು ನೋಂದಣಿಯನ್ನು ರದ್ದುಪಡಿಸುವಂತೆ ಮೀನುಗಾರಿಕಾ ಇಲಾಖೆಗೆ ವರದಿ ಸಲ್ಲಿಸಲಾಗಿದೆ.
ಶುಕ್ರವಾರ ಸಂಜೆ ಸುಮಾರು 6.15ರ ವೇಳೆಗೆ ದೋಣಿಯು ಉಚ್ಚಿಲ ಸಮುದ್ರ ತೀರಕ್ಕೆ ತೇಲಿ ಬಂದಿದ್ದು, ಮಾಹಿತಿ ಪಡೆದ ಹೆಜಮಾಡಿ ಸಿಎಸ್‌ಪಿ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಅಬ್ದುಲ್ ರಜಾಕ್, ಸಿಪಿಸಿ ಪ್ರವೀಣ್, ಕೆಎನ್‌ಡಿ ರಾಜೇಶ್ ಹಾಗೂ ತೀರ್ಥ ಅವರು ಸ್ಥಳೀಯ ಮೀನುಗಾರರು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ದೋಣಿಯನ್ನು ಸುರಕ್ಷಿತವಾಗಿ ಕಡಲ ತೀರಕ್ಕೆ ಎಳೆದು ತಂದಿದ್ದಾರೆ.