ರೆಸಾರ್ಟ್‌ನಲ್ಲಿ ಜೂಜಾಟ ನಿರತ 26 ಮಂದಿ ಬಂಧನ: 17.81 ಲಕ್ಷ ರೂ. ಮೌಲ್ಯದ ವಸ್ತುಗಳ ಜಪ್ತಿ
Wednesday, July 08, 2026
ಉಡುಪಿ ಜಿಲ್ಲೆಯ ಹಿರಿಯಡಕ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ಡೂರು ಗ್ರಾಮದ ಪುತ್ತಿಗೆ ಸ್ವರ್ಣ ಗ್ರೀನ್ ವ್ಯಾಲಿ ರೆಸಾರ್ಟ್‌ನಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಜೂಜಾಟ ನಡೆಸುತ್ತಿದ್ದ ಆರೋಪದಡಿ 26 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 7ರಂದು ರಾತ್ರಿ ಖಚಿತ ಮಾಹಿತಿ ಮೇರೆಗೆ ಹಿರಿಯಡಕ ಪೊಲೀಸರು ರೆಸಾರ್ಟ್‌ನ ಕೊಠಡಿಗೆ ದಾಳಿ ನಡೆಸಿದ್ದು, ಜೂಜಾಟದಲ್ಲಿ ತೊಡಗಿದ್ದ 26 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯ ವೇಳೆ ಜೂಜಾಟಕ್ಕೆ ಬಳಸಲಾಗುತ್ತಿದ್ದ ₹1,31,630 ನಗದು, ಇಸ್ಪೀಟ್ ಎಲೆಗಳು, ಅಂದಾಜು ₹2 ಲಕ್ಷ ಮೌಲ್ಯದ 25 ಮೊಬೈಲ್ ಫೋನ್‌ಗಳು, ಐದು ಕಾರುಗಳು, ಅಂದಾಜು ₹14.50 ಲಕ್ಷ ಮೌಲ್ಯದ ಮೂರು ಮೋಟಾರ್‌ಸೈಕಲ್‌ಗಳು ಹಾಗೂ ಜೂಜಾಟಕ್ಕೆ ಬಳಸುತ್ತಿದ್ದ ಟೇಬಲ್ ಮತ್ತು ಕುರ್ಚಿಗಳನ್ನು ಜಪ್ತಿ ಮಾಡಲಾಗಿದೆ. ಇದರ ಒಟ್ಟು ಮೌಲ್ಯ ಸುಮಾರು ₹17.81 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಅಲ್ಲದೆ, ಜೂಜಾಟಕ್ಕೆ ಅವಕಾಶ ಕಲ್ಪಿಸಿದ ಆರೋಪದ ಹಿನ್ನೆಲೆಯಲ್ಲಿ ಪುತ್ತಿಗೆ ಸ್ವರ್ಣ ಗ್ರೀನ್ ವ್ಯಾಲಿ ರೆಸಾರ್ಟ್‌ನ ಪರವಾನಗಿ ರದ್ದುಪಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.