-->
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಅಣ್ಣಾಮಲೈ ಭೇಟಿ; ವಿಶೇಷ ಪೂಜೆ ಸಲ್ಲಿಕೆ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಅಣ್ಣಾಮಲೈ ಭೇಟಿ; ವಿಶೇಷ ಪೂಜೆ ಸಲ್ಲಿಕೆ


ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡಿನ ರಾಜಕೀಯ ನಾಯಕ ಕೆ. ಅಣ್ಣಾಮಲೈ ಅವರು ಮಂಗಳವಾರ ಉಡುಪಿ ಜಿಲ್ಲೆಯ ಪ್ರಸಿದ್ಧ ಶಕ್ತಿ ಪೀಠವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.


ದೇವಳಕ್ಕೆ ಆಗಮಿಸಿದ ಅಣ್ಣಾಮಲೈ ಅವರನ್ನು ದೇವಳದ ಆಡಳಿತ ಮಂಡಳಿ ಹಾಗೂ ಅರ್ಚಕ ವೃಂದ ಆತ್ಮೀಯವಾಗಿ ಸ್ವಾಗತಿಸಿತು. ಬಳಿಕ ಅವರು ದೇವಿಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ರಾಜ್ಯ ಹಾಗೂ ದೇಶದ ಸುಖ-ಶಾಂತಿ, ಸಮೃದ್ಧಿಗಾಗಿ ಪ್ರಾರ್ಥಿಸಿದರು. ದರ್ಶನದ ಬಳಿಕ ದೇವಳದ ವತಿಯಿಂದ ಶ್ರೀದೇವಿಯ ಪ್ರಸಾದ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಣ್ಣಾಮಲೈ ಸಾಕಷ್ಟು ಸುದ್ದಿಯಲ್ಲಿದ್ದಾರೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಅವರು, ಬಳಿಕ 'ವಿ ದಿ ಲೀಡರ್' (We The Leader) ಹೆಸರಿನ ಹೊಸ ರಾಜಕೀಯ ಚಳವಳಿಯನ್ನು ಆರಂಭಿಸಿದ್ದಾರೆ. ಈ ಚಳವಳಿಯು ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷವಾಗಿ ರೂಪುಗೊಂಡು ತಮಿಳುನಾಡಿನ ರಾಜಕೀಯಕ್ಕೆ ಹೊಸ ಪರ್ಯಾಯವನ್ನು ನೀಡುವ ಉದ್ದೇಶ ಹೊಂದಿದೆ ಎಂದು ಅವರು ಇತ್ತೀಚೆಗೆ ಘೋಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅಣ್ಣಾಮಲೈ ಅವರ ಕೊಲ್ಲೂರು ಭೇಟಿ ರಾಜಕೀಯ ವಲಯದಲ್ಲೂ ಕುತೂಹಲಕ್ಕೆ ಕಾರಣವಾಗಿದ್ದು, ಅವರ ಮುಂದಿನ ರಾಜಕೀಯ ನಡೆ ಕುರಿತು ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ. ಆದರೆ ದೇವಳ ಭೇಟಿಯ ಉದ್ದೇಶದ ಬಗ್ಗೆ ಅಣ್ಣಾಮಲೈ ಅವರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

Ads on article

Advertise in articles 1

advertising articles 2

Advertise under the article