ಉಡುಪಿ ಜಿಲ್ಲೆಯಲ್ಲಿ ಶಾಲಾ ವಾಹನಗಳ ವಿಶೇಷ ತಪಾಸಣೆ: 43 ಪ್ರಕರಣ ದಾಖಲು, 30,800 ರೂ. ದಂಡ ವಸೂಲಿ
ಶಾಲಾ ಮಕ್ಕಳ ಸುರಕ್ಷತೆಯನ್ನು ಪ್ರಮುಖವಾಗಿಟ್ಟುಕೊಂಡು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಜುಲೈ 20ರಿಂದ 27ರವರೆಗೆ ಜಿಲ್ಲೆಯಾದ್ಯಂತ ಶಾಲಾ-ಕಾಲೇಜು ವಾಹನಗಳ ವಿಶೇಷ ತಪಾಸಣೆ ನಡೆಸಿದ್ದು , 43 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿವೆ. ಸುಮಾರು 30,800 ರೂಪಾಯಿ ದಂಡ ವಿಧಿಸಿ ವಸೂಲಿ ಮಾಡಲಾಗಿದೆ.
ವಿಶೇಷ ತಪಾಸಣೆಯಲ್ಲಿ 204 ಬಸ್‌ಗಳು, 69 ಮಿನಿ ಬಸ್‌ಗಳು, 65 ಆಟೋರಿಕ್ಷಾಗಳು ಹಾಗೂ 33 ಕಾರುಗಳು ಸೇರಿದಂತೆ ವಿವಿಧ ಶಾಲಾ ವಾಹನಗಳನ್ನು ಪರಿಶೀಲಿಸಲಾಗಿದೆ
ತಪಾಸಣೆ ವೇಳೆ 29 ವಾಹನಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸಾಗಿಸುತ್ತಿರುವುದು ಹಾಗೂ 5 ವಾಹನಗಳ ಚಾಲಕರು ಸಮವಸ್ತ್ರ ಧರಿಸದೇ ವಾಹನ ಚಾಲನೆ ಮಾಡುತ್ತಿರುವುದು ಸೇರಿದಂತೆ ಒಟ್ಟು 43 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿವೆ. ಸಂಬಂಧಿಸಿದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ಒಟ್ಟು 30,800 ರೂ. ದಂಡ ವಿಧಿಸಿ ವಸೂಲಿ ಮಾಡಲಾಗಿದೆ.
ಇದಲ್ಲದೆ, ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿದ ಪೊಲೀಸರು 295 ಬಸ್‌ಗಳು, 69 ಮಿನಿ ಬಸ್‌ಗಳು ಹಾಗೂ 34 ಕಾರುಗಳು ಸೇರಿದಂತೆ ಇತರ ಶಾಲಾ ವಾಹನಗಳನ್ನು ತಪಾಸಣೆಗೆ ಒಳಪಡಿಸಿದರು. ವಾಹನಗಳ ದಾಖಲೆಗಳು, ಸುರಕ್ಷತಾ ಉಪಕರಣಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳ ಪಾಲನೆಯನ್ನು ಪರಿಶೀಲಿಸಲಾಯಿತು.
ತಪಾಸಣೆ ವೇಳೆ ಶಾಲಾ ವಾಹನಗಳ ಚಾಲಕರು ಹಾಗೂ ನಿರ್ವಾಹಕರಿಗೆ ಸರ್ಕಾರದ ನಿಯಮಗಳು ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಯಿತು. ಜೊತೆಗೆ ರಸ್ತೆ ಸುರಕ್ಷತೆ, ಮಕ್ಕಳ ಸುರಕ್ಷಿತ ಸಾರಿಗೆ, ಸಂಚಾರ ನಿಯಮಗಳು ಹಾಗೂ ಸಂಬಂಧಿತ ಕಾನೂನುಗಳ ಕುರಿತು ಜಾಗೃತಿ ಮೂಡಿಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಗಿದೆ.
ಶಾಲಾ ಮಕ್ಕಳ ಸುರಕ್ಷಿತ ಸಂಚಾರಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಆದ್ಯತೆ ನೀಡುತ್ತಿದ್ದು, ಇಂತಹ ವಿಶೇಷ ತಪಾಸಣೆ ಹಾಗೂ ಜಾಗೃತಿ ಅಭಿಯಾನಗಳನ್ನು ಮುಂದುವರಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಶಾಲಾ ಆಡಳಿತ ಮಂಡಳಿಗಳು, ವಾಹನ ಮಾಲೀಕರು, ಚಾಲಕರು ಹಾಗೂ ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದೆ.
