ಬೆಳ್ತಂಗಡಿ: ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆ
ಬೆಳ್ತಂಗಡಿಯ ಗುರುವಾಯನಕೆರೆ ಖಾಸಗಿ ವಿದ್ಯುತ್ ಸಬ್‌ಸ್ಟೇಷನ್ ಸಮೀಪ ಅವಿವಾಹಿತ ಯುವಕನೊಬ್ಬನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ತಣ್ಣೀರುಪಂತ ಗ್ರಾಮದ ಕಲ್ಲೇರಿ ಜನತಾ ಕಾಲನಿ ನಿವಾಸಿ ಶರೀಫ್ ಕೆ. ಅವರ ಪುತ್ರ ಮುಸ್ತಾಕ್ (27) ಎಂದು ಗುರುತಿಸಲಾಗಿದೆ. ಅವರು ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಕುಟುಂಬದವರ ಮಾಹಿತಿ ಪ್ರಕಾರ, ಜೂನ್ 30ರಂದು ಮೃತನ ಸಹೋದರ ಮನಾಸಿರ್ ಅವರು ಮುಸ್ತಾಕ್ ಅವರನ್ನು ಬೈಕ್‌ನಲ್ಲಿ ಕಲ್ಲೇರಿಯಿಂದ ಮದ್ದಡ್ಕದಲ್ಲಿದ್ದ ಲಾರಿಯ ಬಳಿ ಬಿಟ್ಟು ಹೋಗಿದ್ದರು. ಬಳಿಕ ಅವರು ಮನೆಗೆ ವಾಪಸಾಗಿರಲಿಲ್ಲ. ಇದೀಗ ಕುವೆಟ್ಟು ಗ್ರಾಮದ ಶಕ್ತಿನಗರ ಸಮೀಪದ ಖಾಸಗಿ ವಿದ್ಯುತ್ ಸಬ್‌ಸ್ಟೇಷನ್ ಬಳಿ ಅವರ ಮೃತದೇಹ ಪತ್ತೆಯಾಗಿದೆ.
ಮೃತನ ತಂದೆ ಶರೀಫ್ ಅವರು ತಮ್ಮ ಮಗನನ್ನು ಕೊಲೆ ಮಾಡಿ ಬಳಿಕ ಮೃತದೇಹವನ್ನು ಈ ಸ್ಥಳಕ್ಕೆ ತಂದು ಎಸೆದಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೃತದೇಹ ಪತ್ತೆಯಾದ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಭದ್ರತಾ ಸಿಬ್ಬಂದಿ ಇಲ್ಲದಿರುವುದನ್ನೂ ಅವರು ಆರೋಪಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯ ಎಸ್‌ಐ ಆನಂದ್, ಸೋಕೋ (SOCO) ತಂಡ ಹಾಗೂ ಕುವೆಟ್ಟು ಗ್ರಾಮ ಪಂಚಾಯತ್ ಪಿಡಿಒ ಇಮ್ತಿಯಾಝ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.