-->
ಮೂತ್ರಪಿಂಡದ  ಕ್ಯಾನ್ಸರ್ ಗೆಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವೈದ್ಯರ  ಸಾಧನೆ

ಮೂತ್ರಪಿಂಡದ ಕ್ಯಾನ್ಸರ್ ಗೆಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವೈದ್ಯರ ಸಾಧನೆ


ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಅಂಗಸಂಸ್ಥೆಯಾದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು, ಶಿವಮೊಗ್ಗದ 63 ವರ್ಷದ ವ್ಯಕ್ತಿಯ ಮೂತ್ರಪಿಂಡದಿಂದ ಹೃದಯದ ಬಲ ಹೃತ್ಕರ್ಣದವರೆಗೆ ಹರಡಿದ್ದ ಅಪರೂಪದ ಕ್ಯಾನ್ಸರ್ ಗೆಡ್ಡೆಯನ್ನು ಸುಮಾರು 12 ಗಂಟೆಗಳ ಕಾಲ ನಡೆದ ಸಂಕೀರ್ಣ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ತೆರವುಗೊಳಿಸಿದ್ದಾರೆ.

ರೋಗಿಯ ಎಡ ಮೂತ್ರಪಿಂಡದಲ್ಲಿ ಉಂಟಾಗಿದ್ದ ಕ್ಯಾನ್ಸರ್ ಗೆಡ್ಡೆಯು ದೇಹದ ಅತಿದೊಡ್ಡ ರಕ್ತನಾಳವಾದ ಕೆಳಮಟ್ಟದ ವೆನಾ ಕ್ಯಾವಾ (IVC) ಮೂಲಕ ಹೃದಯದ ಬಲ ಹೃತ್ಕರ್ಣದವರೆಗೆ ವಿಸ್ತರಿಸಿತ್ತು. ಇಂತಹ ಪ್ರಕರಣಗಳು ಮೂತ್ರಪಿಂಡದ ಕ್ಯಾನ್ಸರ್‌ನ ಅತ್ಯಂತ ಅಪರೂಪದ ಹಾಗೂ ಜೀವಕ್ಕೆ ಅಪಾಯಕಾರಿಯಾದ ಹಂತಗಳಲ್ಲಿ ಒಂದಾಗಿವೆ.

ಹೊಟ್ಟೆನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಗೆ ನಡೆಸಿದ ತಪಾಸಣೆ ವೇಳೆ ಈ ಅಪರೂಪದ ಸಮಸ್ಯೆ ಪತ್ತೆಯಾಯಿತು. ಮೂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಘಟಕದ ಮುಖ್ಯಸ್ಥ ಡಾ. ಅರುಣ್ ಚಾವ್ಲಾ ಅವರ ನೇತೃತ್ವದಲ್ಲಿ ಮೂತ್ರಶಾಸ್ತ್ರ ಮತ್ತು ಹೃದಯ, ಎದೆ ಹಾಗೂ ರಕ್ತನಾಳಗಳ ಶಸ್ತ್ರಚಿಕಿತ್ಸೆ (CTVS) ವಿಭಾಗದ ತಜ್ಞರು ಜಂಟಿಯಾಗಿ ಶಸ್ತ್ರಚಿಕಿತ್ಸೆಯ ಯೋಜನೆ ರೂಪಿಸಿದರು. ರೋಗಿಗೆ ಮಧುಮೇಹ, ಅಧಿಕ ರಕ್ತದೊತ್ತಡ, ಥೈರಾಯ್ಡ್ ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳಿದ್ದ ಕಾರಣ, ವಿವಿಧ ವಿಭಾಗಗಳ ತಜ್ಞರು ಪೂರ್ವಭಾವಿಯಾಗಿ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಿದರು.

ಜೂನ್ 17ರಂದು ನಡೆದ ಶಸ್ತ್ರಚಿಕಿತ್ಸೆಯಲ್ಲಿ ಮೊದಲು ಕ್ಯಾನ್ಸರ್ ಪೀಡಿತ ಮೂತ್ರಪಿಂಡವನ್ನು ತೆರವುಗೊಳಿಸಲಾಯಿತು. ಬಳಿಕ ಹೃದಯ-ಶ್ವಾಸಕೋಶ ಯಂತ್ರದ ನೆರವಿನಿಂದ ದೇಹದ ಉಷ್ಣತೆಯನ್ನು 22 ಡಿಗ್ರಿ ಸೆಲ್ಸಿಯಸ್‌ಗೆ ಇಳಿಸಿ, ಸಂಪೂರ್ಣ ರಕ್ತಪರಿಚಲನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಹೃದಯದ ಬಲ ಹೃತ್ಕರ್ಣ ಹಾಗೂ IVCಯೊಳಗಿನ ಗೆಡ್ಡೆಯನ್ನು ಒಂದೇ ತುಂಡಿನಲ್ಲಿ ಯಶಸ್ವಿಯಾಗಿ ಹೊರತೆಗೆಯಲಾಯಿತು. ಬಳಿಕ ರಕ್ತಪರಿಚಲನೆಯನ್ನು ಪುನರಾರಂಭಿಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.

ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯನ್ನು ಸುಮಾರು 12 ಗಂಟೆಗಳ ಕಾಲ ಐಸಿಯುನಲ್ಲಿ ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿತ್ತು. ಮೂರು ದಿನಗಳಲ್ಲೇ ಅವರು ನಡೆಯುವಷ್ಟು ಚೇತರಿಸಿಕೊಂಡಿದ್ದು, ಎರಡು ವಾರಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಅವರು ಶಿವಮೊಗ್ಗದಲ್ಲಿ ವೈದ್ಯರ ಸಲಹೆಯಂತೆ ಚೇತರಿಸಿಕೊಳ್ಳುತ್ತಿದ್ದಾರೆ.

ಈ ಶಸ್ತ್ರಚಿಕಿತ್ಸೆಯಲ್ಲಿ CTVS ವಿಭಾಗದ ಹಿರಿಯ ತಜ್ಞರಾದ ಡಾ. ಶ್ಯಾಮ್ ಕೆ. ಅಶೋಕ್ ಹಾಗೂ ಡಾ. ಗಣೇಶ್ ಕಾಮತ್, ಮೂತ್ರಶಾಸ್ತ್ರ ವಿಭಾಗದ ಡಾ. ಅರುಣ್ ಚಾವ್ಲಾ ಮತ್ತು ಡಾ. ಜಿ.ವಿ. ಶ್ರೀನಾಥ್ ಪ್ರಮುಖ ಪಾತ್ರವಹಿಸಿದ್ದರು. ಅರಿವಳಿಕೆ ತಜ್ಞರು, ಪರ್ಫ್ಯೂಷನ್ ತಂಡ, ತೀವ್ರ ನಿಗಾ ಹಾಗೂ ಅಂತಃಸ್ರಾವಶಾಸ್ತ್ರ ವಿಭಾಗದ ವೈದ್ಯರು ಸಹ ಕಾರ್ಯಾಚರಣೆಗೆ ಬೆಂಬಲ ನೀಡಿದರು.

"ಮೂತ್ರಪಿಂಡದ ಕ್ಯಾನ್ಸರ್ ಹೃದಯದವರೆಗೆ ಹರಡಿದಾಗ ಚಿಕಿತ್ಸೆ ಅತ್ಯಂತ ಸವಾಲಿನದ್ದಾಗಿರುತ್ತದೆ. ವಿವಿಧ ವಿಭಾಗಗಳ ಸಮನ್ವಯ ಮತ್ತು ಪರಿಣಿತ ವೈದ್ಯರ ತಂಡದ ಸಹಕಾರದಿಂದ ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲು ಸಾಧ್ಯವಾಯಿತು," ಎಂದು ಡಾ. ಅರುಣ್ ಚಾವ್ಲಾ ತಿಳಿಸಿದ್ದಾರೆ.

"ಅತ್ಯಂತ ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ವಿಶ್ವಮಟ್ಟದ ಚಿಕಿತ್ಸೆ ನೀಡುವುದು ಕಸ್ತೂರ್ಬಾ ಆಸ್ಪತ್ರೆಯ ಬದ್ಧತೆಯಾಗಿದೆ. ಪರಿಣತ ವೈದ್ಯರು ಹಾಗೂ ಅತ್ಯಾಧುನಿಕ ಸೌಲಭ್ಯಗಳಿಂದ ಇಂತಹ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗಿದೆ," ಎಂದು ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article